ರಾಜ್ಯ ಕಾಂಗ್ರೇಸಿನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಬೆಳಗಾವಿ(ಸುವರ್ಣ ಸೌಧ),ಡಿ.14- ರಾಜ್ಯ ಕಾಂಗ್ರೆಸ್‍ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಚಿವ ಸ್ಥಾನ ವಂಚಿತರ ಅಸಮಾಧಾನ ಒಂದೆಡೆಯಾದರೆ, ಹಾಲಿ ಸಚಿವ ಸ್ಥಾನ ಕಳೆದು ಕೊಳ್ಳುವ ಭೀತಿಯಲ್ಲಿರುವ ಕೆಲವು ನಾಯಕರು ಇದೀಗ ಒತ್ತಡ ತಂತ್ರ ಅನುಸರಿಸಲು ಮುಂದಾಗಿದ್ದಾರೆ.

ಸರ್ಕಾರ ರಚನೆ ಆರಂಭದಿಂದಲೂ ಸಂಪುಟ ವಿಸ್ತರಣೆಯೆಂಬುದು ಗಗನ ಕುಸುಮವಾಗಿಯೇ ಇದೆ.ಪ್ರತಿ ಬಾರಿಯೂ ಒಂದಲ್ಲ ಒಂದು ನೆಪವೊಡ್ಡಿ ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಲೇ ಬರಲಾಗುತ್ತಿದೆ.ಇದೀಗ ಡಿ. 22ಕ್ಕೆ ಸಂಪುಟ ವಿಸ್ತರಣೆಯ ದಿನಾಂಕ ನಿಗದಿಯಾಗಿದೆಯಾದರೂ ಈ ಬಾರಿಯೂ ವಿಸ್ತರಣೆ ಸಾಧ್ಯತೆ ಕ್ಷೀಣವೆಂದೇ ಹೇಳಲಾಗುತ್ತಿದೆ.

ಡಿ.21ರಂದು ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಭೇಟಿಗೆ ತೆರಳಲು ನಿರ್ಧರಿಸಿದ್ದಾರೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಹುಲ್ ಗಾಂಧಿ ಮೂರು ರಾಜ್ಯಗಳ ಸರ್ಕಾರ ರಚನೆಯಲ್ಲಿ ಮುಳುಗಿದ್ದಾರೆ.ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದ್ದು, ರಾಹುಲ್‍ಗೆ ಮೂರು ರಾಜ್ಯಗಳಲ್ಲಿನ ಸರ್ಕಾರ ರಚನೆ ಸವಾಲಾಗಿ ಪರಿಣಮಿಸಿದೆ.

ಸದ್ಯಕ್ಕೆ ರಾಹುಲ್ ಗಾಂಧಿ ಕರ್ನಾಟಕದತ್ತ ಚಿತ್ತ ಹರಿಸಲು ಸಿದ್ದರಿಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಒತ್ತಡ ಹೆಚ್ಚಾಗಿರುವ ಹಿನ್ನೆಲೆ ಅನಿವಾರ್ಯವಾಗಿ ನಾಯಕರು ರಾಹುಲ್ ಭೇಟಿ ಮುಂದಾಗಿದ್ದು, ವಿಸ್ತರಣೆಯ ಕುರಿತಾದ ಚರ್ಚೆ ನಡೆಯುವ ಬಗ್ಗೆಯೇ ಅನುಮಾನವಿದೆ.

ಖಾತೆ ಉಳಿಸಿಕೊಳ್ಳಲು ಕಸರತ್ತು:
ಮತ್ತೊಂದೆಡೆ ಸಂಪುಟ ಪುನರ್ರಚನೆಯ ಮಾತುಗಳು ಕೇಳಿ ಬರುತ್ತಿದ್ದು, ಸಂಪುಟದಿಂದ ಹಾಲಿ ಸಚಿವರಾದ ಶಂಕರ್, ಜಯಮಾಲ, ಜಮೀರ್ ಅಹ್ಮದ್, ಶಿವಾನಂದ ಪಾಟೀಲ್, ರಮೇಶ್ ಜಾರಕಿ ಹೊಳಿ ಸೇರಿದಂತೆ ಕೆಲವರಿಗೆ ಕೊಕ್ ಕೊಡುವ ಸಾಧ್ಯತೆಗಳು ದಟ್ಟವಾಗಿವೆ.

ಸಚಿವ ಸ್ಥಾನ ಕೈತಪ್ಪುವ ಸುಳಿವರಿತ ಮುಖಂಡರು ಇದೀಗ ಸಚಿವ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯನವರ ಬೆನ್ನು ಬಿದ್ದಿದ್ದಾರೆ. ಬಹುತೇಕರು ಸಿದ್ದರಾಮಯ್ಯನವರ ಬೆಂಬಲಿಗರೇ ಆಗಿದ್ದು, ತಮಗಾಗುತ್ತಿರುವ ಅನ್ಯಾಯ ಸರಿಪಡಿಸಲು ದುಂಬಾಲು ಬಿದ್ದಿದ್ದಾರೆ.

ಕೆಲವರು ಪಕ್ಷ ಬಿಡುವ ಕುರಿತು ಎಚ್ಚರಿಕೆ ನೀಡಿದ್ದು, ಕೈ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.ಜಮೀರ್ ಅಹ್ಮದ್ ಅಲ್ಪಸಂಖ್ಯಾತ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡಿ ಎಂದು ನೀಡಿರುವ ಹೇಳಿಕೆ ಸಂಪುಟ ವಿಸ್ತರಣೆಯಂತೆಯೇ, ಪುನರ್ರಚನೆಯೂ ಸುಲಭ ಸಾಧ್ಯವಲ್ಲ ಎಂಬ ಸಂದೇಶ ರವಾನಿಸಿದೆ.

ಇನ್ನು ಪಕ್ಷೇತರ ಶಂಕರ್ ಅವರನ್ನು ಸಚಿವ ಸ್ಥಾನದಿಂದ ತೆಗೆದರೆ ಆಗುವ ಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿದೆ.ರಮೇಶ್ ಜಾರಕಿಹೊಳಿ ಬದಲಿಗೆ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಲೆಕ್ಕಾಚಾರವು ಇದ್ದು, ಇದೀಗ ಸಹೋದರರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

ಮತ್ತೊಂದೆಡೆ ಕೆಲವರ ಖಾತೆ ಬದಲಾವಣೆಯನ್ನೂ ಮಾಡುವ ಕುರಿತು ಚರ್ಚೆ ನಡೆದಿದ್ದು ಇದು ಮತ್ತಷ್ಟು ಗೊಂದಲ, ಗೋಚಲುಗಳಿಗೆ ಎಡೆ ಮಾಡಿಕೊಡಲಿದೆ.ಇನ್ನು ಹಿರಿಯರ ಮುಖಂಡರು ಸಚಿವ ಸ್ಥಾನಕ್ಕಾಗಿ ಲಾಭಿ ಆರಂಭಿಸಿರುವುದು ರಾಜ್ಯ ಕಾಂಗ್ರೆಸ್ಸನ್ನು ಹೈರಾಣಾಗಿಸಿದೆ.

ಒಟ್ಟಾರೆ ರಾಜ್ಯ ಕಾಂಗ್ರೆಸ್‍ನಲ್ಲಿ ಸಂಪುಟ ವಿಸ್ತರಣೆ, ಪುನರ್ರಚನೆ, ಖಾತೆ ಬದಲಾವಣೆಯ ಬೇಗುದಿಯಿದ್ದರೆ, ಮತ್ತೊಂದೆಡೆ ಸಚಿವಾಕಾಂಕ್ಷಿಗಳು, ಸಚಿವ ಸ್ಥಾನ ಉಳಿಸಿಕೊಳ್ಳಲು ಹೆಣಗುತ್ತಿರುವ ಶಾಸಕರಲ್ಲಿ ಆತಂಕ ಮನೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ