ಸಿದ್ದಗಂಗಾ ಶ್ರೀಗಳ ದರ್ಶನಕ್ಕೆ ಚೆನ್ನೈಗೆ ತೆರಳಿದ ಸಿ.ಎಂ

ಬೆಳಗಾವಿ,ಡಿ.14- ಮುಖ್ಯಮಂತ್ರಿ ಕಮಾರಸ್ವಾಮಿ ಅವರು ಇಂದು ಮಧ್ಯಾಹ್ನ ಸಿದ್ದಗಂಗಾ ಶ್ರೀಗಳ ದರ್ಶನಕ್ಕೆ ಚೆನ್ನೈಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರೊಂದಿಗೆ ನಡೆಸಬೇಕಾಗಿದ್ದ ಸಭೆ ದಢೀರ್ ರದ್ದಾಗಿದೆ.

ಕಬ್ಬಿನ ಬಾಕಿ ಹಣಕ್ಕೆ ಒತ್ತಾಯಿಸಿ ಸತತ ಒಂದು ತಿಂಗಳಿಂದ ಪ್ರತಿಭಟನೆ ನಡೆಸಿದ ಅನ್ನದಾತರೊಂದಿಗೆ ನಿನ್ನೆ ಸಂಜೆ ಸಿಎಂ ಕುಮಾರಸ್ವಾಮಿ ಅವರು ಸಭೆ ನಡೆಸಿ ಧರಣಿನಿರತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

ಈ ನಡುವೆ ರೈತ ಮುಖಂಡರೊಂದಿಗೆ ಇಂದು ಅವರು ನಡೆಸಬೇಕಾಗಿದ್ದ ಸಭೆಯ ತೀರ್ಮಾನದತ್ತ ಎಲ್ಲರ ಚಿತ್ತ ಹರಿದು ತೀವ್ರ ಕುತೂಹಲ ಮೂಡಿಸಿತ್ತು.ಆದರೆ, ಇಂದು ಬೆಳಗ್ಗೆ ಜಿಲ್ಲಾಡಳಿತ ಮೂಲಗಳಿಂದ ಸಭೆ ರದ್ದಾದ ಬಗ್ಗೆ ಮಾಹಿತಿ ಹೊರಬಿದ್ದಿದೆ.

ನಿನ್ನೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೆÇಲೀಸರು ತಡೆದರು.ಸಕ್ಕರೆ ಸಚಿವ ಜಾರ್ಜ್ ಅವರು ರೈತರನ್ನು ಸಮಾಧಾನಗೊಳಿಸಲು ಯತ್ನ ನಡೆಸಿದರು.ಅದರ ಬೆನ್ನಲ್ಲೇ ನಿನ್ನೆ ಸಂಜೆ ಕುಮಾರಸ್ವಾಮಿಯವರು ಸುವರ್ಣ ವಿಧಾನಸೌಧದಲ್ಲಿ ರೈತಮುಖಂಡರೊಟ್ಟಿಗೆ ಸಭೆ ನಡೆಸಿದರು.ಈ ಸಭೆಯಲ್ಲಿ ಸಕ್ಕರೆ ಸಚಿವ ಕೆ.ಜೆ.ಜಾರ್ಜ್, ಜಿಲ್ಲಾಧಿಕಾರಿ ಬೊಮ್ಮನಹಳ್ಳಿ, ರೈತಮುಖಂಡ ಸಿದ್ದಗೌಡ ಮೊದಗಿ, ಚೂನಪ್ಪ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುಮಾರು ಅರ್ಧ ಗಂಟೆ ನಡೆದ ಸಭೆಯಲ್ಲಿ ರೈತ ಮುಖಂಡರು ತಮ್ಮ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಲ್ಲಿ ಅವಲತ್ತುಕೊಂಡರು.ಮಾತುಕತೆ ನಡೆಸಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಿದರು.ಈ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಸಭೆ ನಡೆಯಬೇಕಾಗಿತ್ತು.

ಈ ನಡುವೆ ನಿನ್ನೆ ಸಭೆ ಬಳಿಕ ರೈತ ಮುಖಂಡರು ಮುಖ್ಯಮಂತ್ರಿಗಳೊಂದಿಗಿನ ಸಭೆ ನಮಗೆ ತೃಪ್ತಿ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.ಉಳಿದ ರೈತ ಮುಖಂಡರೊಟ್ಟಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಆದರೆ, ಇಂದು ಬೆಳಗ್ಗೆ ಈ ಮಹತ್ವದ ಸಭೆ ಕಾರಣಾಂತರಗಳಿಂದ ರದ್ದಾಗಿದೆ ಎನ್ನಲಾಗಿದ್ದು ನಾಳೆ ಬೆಳಗ್ಗೆ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಲಿದ್ದಾರೆ.
ಇದರ ಬೆನ್ನಲ್ಲೇ ನಾಲ್ಕು ಜನರ ಸಮಿತಿ ರಚನೆ ಮಾಡಲಿದ್ದು ಒಂದು ತಿಂಗಳಲ್ಲಿ ಸಮಿತಿ ನೀಡಲಿರುವ ವರದಿ ಆದರಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ