
ಬೆಂಗಳೂರು, ಡಿ.14-ಇಸ್ಪೀಟ್ ಕ್ಲಬ್ವೊಂದರ ಮೇಲೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು 39 ಮಂದಿಯನ್ನು ಬಂಧಿಸಿ 62,540 ರೂ. ನಗದು ಹಾಗೂ ಆಟಕ್ಕೆ ಸಂಬಂಧಿಸಿದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಿಂಡ್ಲು ಮುಖ್ಯರಸ್ತೆಯ ನಂಜಪ್ಪ ಸರ್ಕಲ್ ಹತ್ತಿರ ಬಿಲ್ಡಿಂಗ್ ನಂ.238, 1ನೇ ಮಹಡಿಯಲ್ಲಿರುವ ಸುಜಿತ್ ಸ್ಫೋಟ್ರ್ಸ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ನಲ್ಲಿ ನಿಯಮಗಳನ್ನು ಉಲ್ಲಂಘಿಸಿ ಹಣವನ್ನು ಪಣವಾಗಿಟ್ಟುಕೊಂಡು 40 ಮಂದಿ ಇಸ್ಪೀಟ್ ಆಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಕ್ಲಬ್ ಮೇಲೆ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದು, ಒಬ್ಬ ತಲೆಮರೆಸಿಕೊಂಡಿದ್ದಾನೆ.
ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ಕುಮಾರ್, ಉಪಪೊಲೀಸ್ ಆಯುಕ್ತ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ವಿಶೇಷ ವಿಚಾರಣಾ ದಳದ ಇನ್ಸ್ಪೆಕ್ಟರ್ ನಿರಂಜನ್ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.