ಬೆಂಗಳೂರು,ಡಿ.14- ಆಂಬಿಡೆಂಟ್ ಕಂಪನಿಯ ವಂಚನೆ ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದ್ದು, ಭ್ರಷ್ಟ ರಾಜಕಾರಣಿಗಳನ್ನು ರಕ್ಷಿಸುವ ಮೂಲಕ ಸಂತ್ರಸ್ತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರಲ್ಲಿ ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈ ಲಿ., ಕಂಪನಿಯ ಸಯ್ಯದ್ ಫರೀದ್ ಅಹಮದ್ ಎಂಬ ವ್ಯಕ್ತಿ ಅಮಾಯಕರಿಗೆ ಮತ್ತು ಬಡವರು ಕೆಳವರ್ಗದವರಿಂದ 5%ರಿಂದ 10 %ವರೆಗೆ ಬಡ್ತಿ ನೀಡುತೇವೆ ಎಂದು 15 ಸಾವಿರಕ್ಕೂ ಹೆಚ್ಚು ಮಂದಿಯಿಂದ 950 ಕೋಟಿ ರೂ.ನಷ್ಟು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಆದರೆ ಇಲ್ಲಿಯವರೆಗೂ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಬಡವರು, ಅನಕ್ಷರಸ್ಥರು ವಂಚನೆಗೊಳಗಾಗಿದ್ದಾರೆ.ಈ ವಂಚನೆಗೊಳಗಾದ ಜನರು 2017ರಿಂದಲೂ ನ್ಯಾಯಕ್ಕಾಗಿ ಮತ್ತು ತಮ್ಮ ಹಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಿದರೂ ಸಹ ಅದು ಹೊರಬೀಳದಂತೆ ನೋಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ವಿಜಯ್ ಟಾಟ ಎಂಬಾತನು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾನೆ. ಇಷ್ಟೆಲ್ಲ ಮಾಹಿತಿ ಸರ್ಕಾರಕ್ಕೆ ತಿಳಿದಿದ್ದರೂ ಸಹ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳದೆ ವಂಚೆನಗೊಳಗಾದವರಿಗೆ ನ್ಯಾಯ ಕೊಡಿಸದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಪಾದಿಸಿದರು.
ಸರ್ಕಾರವು ಕೂಡಲೇ ಇವರ ಮೇಲೆ ಕಾನೂನು ಕ್ರಮ ಕೈಗೊಂಡು ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಹೇಳಿದರು.