ಮುಖ್ಯಮಂತ್ರಿ ಹುದ್ದೆ ರೇಸ್​ನಲ್ಲಿ ಗೆಲ್ಲುವವರಾರು? ರಾಹುಲ್ ಮುಂದಿದೆ ದೊಡ್ಡ ಸವಾಲು

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಗೆದ್ದು ಬೀರಿತ್ತು. ಈ ಗೆಲುವಿನ ಸಂಭ್ರಮದಲ್ಲಿರುವ ಪಕ್ಷದ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಇಂದು ನಿಜವಾದ ಸವಾಲನ್ನು ಎದುರಿಸಲಿದ್ದಾರೆ. ಈ ಮೂರೂ ರಾಜ್ಯಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ ತೀವ್ರ ಪೈಪೋಟಿ ಇದ್ದು, ಇದನ್ನು ನಿಭಾಯಿಸುವ ದೊಡ್ಡ ಜವಾಬ್ದಾರಿ ರಾಹುಲ್​ಗೆ ಇದೆ.

ಇಂದು ನಡೆಯುವ ಕಾಂಗ್ರೆಸ್​ ಸಂಸದೀಯ ಸಭೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್​ ಯಶಸ್ವಿಯಾಗಿತ್ತು. ಈ ರಾಜ್ಯದಲ್ಲಿ ಕಾಂಗ್ರೆಸ್​ನ ಅನುಭವಿ ನಾಯಕ ಅಶೋಕ್​ ಗೆಹ್ಲೋಟ್​ ಹಾಗೂ ಯುವ ನಾಯಕ ಸಚಿನ್​ ಪೈಲಟ್​ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು. ಹಾಗಾಗಿ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸವಾಲು ರಾಹುಲ್​ಗಿದೆ.

ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಕಮಲ್​ನಾಥ್​ ಇಬ್ಬರೂ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದಾರೆ. ಇನ್ನು, ಚತ್ತೀಸ್​​ಗಢದಲ್ಲಿ ಭೂಪೇಶ್​​ ಭಾಗೇಲ್​ ಹಾಗೂ ಟಿಎಸ್​​ ಸಿಂಗ್​ ಡಿಯೋ ಮುಖ್ಯಮಂತ್ರಿ ಹುದ್ದೆಯ ರೇಸ್​​ನಲ್ಲಿದ್ದಾರೆ.​​ ಇವರಲ್ಲಿ ರಾಹುಲ್​ ಯಾರಿಗೆ ಸಿಎಂ ಪಟ್ಟ ನೀಡಲಿದ್ದಾರೆ ಎಂಬುದು ಇಂದು ನಿರ್ಧಾರವಾಗಲಿದೆ. ಈಗಾಗಲೇ ಸಿಎಂ ಹುದ್ದೆಯ ರೇಸ್​ನಲ್ಲಿರುವ ಎಲ್ಲರೂ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.

ಪಕ್ಷದ ಹೈಕಮಾಂಡ್​ ಆಯ್ಕೆಯನ್ನು ನಾವೆಲ್ಲರೂ ಸ್ವೀಕರಿಸುವುದಾಗಿ ಕಾಂಗ್ರೆಸ್​ ಶಾಸಕರು ತಿಳಿಸಿದ್ದಾರೆ. ಅದಾಗ್ಯೂ ತಮ್ಮಿಷ್ಟದ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡದಿದ್ದರೆ ಅಸಮಾಧಾನ ಭುಗಿಲೇಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮುಖ್ಯಮಂತ್ರಿ ಹುದ್ದೆ ಹಂಚಿಕೆ ಆಗದ ಮೊದಲೇ ವಿಜಯ್​ ಮಲ್ಯಾ ಟ್ವೀಟ್​ ಮಾಡಿದ್ದು, ಸಚಿನ್​ ಪೈಲಟ್​ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾಗೆ ಅಭಿನಂದನೆ ತಿಳಿಸಿದ್ದಾರೆ. ಹಾಗಾಗಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ರಾಹುಲ್​ ಯಾರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ ಎಂಬುದು ಇವರಿಗೆ ತಿಳಿದಿದೆಯೇ ಎನ್ನುವ ಅನುಮಾನ ಕಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ