ಕೆಸಿ ವ್ಯಾಲಿಯಿಂದ ಮಹದೇವಪುರ ವಿಧಾನಸಭಾ ಕ್ಷೇತ್ರದ ಕೆರೆಗಳಿಗೂ ನೀರು, ಸಚಿವ ಸಿ.ಎಸ್.ಪುಟ್ಟರಾಜು

ಬೆಳಗಾವಿ(ಸುವರ್ಣಸೌಧ), ಡಿ.13- ಕೆಸಿ ವ್ಯಾಲಿಯಿಂದ ಕೋಲಾರ-ಚಿಕ್ಕಬಳ್ಳಾಪುರ ಕೆರೆಗಳಿಗೆ ಸಂಸ್ಕರಿಸಿದ ನೀರು ಸರಬರಾಜು ಮಾಡುವಾಗ ಮಹದೇವಪುರ ವಿಧಾನಸಭಾ ಕ್ಷೇತ್ರದ ಕೆರೆಗಳ ಭರ್ತಿಗೂ ಕ್ರಮ ಕೈಗೊಳ್ಳುವುದಾಗಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಅರವಿಂದಲಿಂಬಾವಳಿ ಪ್ರಶ್ನೆಗೆ ಉತ್ತರಿಸಿದ ಅವರು, ಕೆಸಿ ವ್ಯಾಲಿ ಸಂಸ್ಕರಣಾ ಘಟಕದಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ 126 ಕೆರೆಗಳಿಗೆ 1450 ಕೋಟಿ ಖರ್ಚು ಮಾಡಿ ನೀರು ತುಂಬಿಸಲಾಗುತ್ತಿದೆ. ಏತ ನೀರಾವರಿ ಮೂಲಕ ಆನೇಕಲ್ ತಾಲ್ಲೂಕಿನ 67 ಕೆರೆಗಳಿಗೆ, ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ರಾಹುತನಹಳ್ಳಿ ಮತ್ತು ಮಾವತ್ತೂರು ಕೆರೆಗಳಿಗೆ ನೀರು ತುಂಬಿಸಲು 260.60 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು.

ಆದರೆ, ಉಪ ಪ್ರಶ್ನೆ ಕೇಳಿದ ಅರವಿಂದ ಲಿಂಬಾವಳಿ, ಯೋಜನೆಗಾಗಿ ಪೈಪ್‍ಲೈನ್ ಅಳವಡಿಸಲು ಮಹದೇವಪುರ ಕ್ಷೇತ್ರದಲ್ಲಿ 19 ಕಿ.ಮೀ. ರಸ್ತೆಯನ್ನು ಸುಮಾರು 12 ಅಡಿ ಆಳಕ್ಕೆ ಅಗೆಯಲಾಗಿದೆ.ಪೈಪ್‍ಲೈನ್ ಅಳವಡಿಸಿದ ಮೇಲೆ ಗುಂಡಿಯನ್ನು ಮಣ್ಣಿನಿಂದ ಮುಚ್ಚಲಾಗಿದೆ.ಪದೇ ಪದೇ ಗುಂಡಿ ಆಳಬೀಳುತ್ತಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.ಮಾಹಿತಿ ತಂತ್ರಜ್ಞಾನ ಉದ್ಯಮಗಳು ಹೆಚ್ಚಿರುವ ನನ್ನ ಕ್ಷೇತ್ರದಲ್ಲಿ ರಸ್ತೆ ಅಗೆದಿರುವುರಿಂದ ಸಂಚಾರಕ್ಕೆ ಅಡಚಣೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಟೀಕಿಸಿದ್ದಾರೆ.ಕೇವಲ ಮಣ್ಣು ತುಂಬಿದರೆ ರಸ್ತೆ ಗುಂಡಿ ಮಚ್ಚಿದಂತಾಗುವುದಿಲ್ಲ. ಅದನ್ನು ವೈಜ್ಞಾನಿಕವಾಗಿ ಸರಿಪಡಿಸಬೇಕು.ಅದಕ್ಕಾಗಿ ವಿಶೇಷ ಪ್ಯಾಕೇಜ್ ನೀಡಿ ಎಂದು ಒತ್ತಾಯಿಸಿದ ಅವರು, ಕ್ಷೇತ್ರದ ಕೆರೆಗಳಿಗೂ ನೀರು ತುಂಬಿಸಿ ಎಂದು ಆಗ್ರಹಿಸಿದರು.

ಗುಂಡಿ ಸರಿಯಾಗಿ ಸೆಟ್ಟಾದ ಬಳಿಕ ಡಾಂಬರೀಕರಣ ಕೈಗೊಳ್ಳಲಾಗುವುದು.ಕೆರೆಗಳಿಗೆ ನೀರು ತುಂಬಿಸಲು ಪರಿಶೀಲನೆ ನಡೆಸಲಾಗುವುದು.ಖುದ್ದಾಗಿ ನಾನೇ ನಿಮ್ಮ ಕ್ಷೇತ್ರಕ್ಕೆ ಬಂದು ಅಧಿಕಾರಿಗಳ ಜತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್‍ಕುಮಾರ್, ಅರವಿಂದ್ ಲಿಂಬಾವಳಿ ಅವರ ಸಮಸ್ಯೆ ಬಗೆಹರಿಸುವುದು ನನ್ನ ಜವಾಬ್ದಾರಿ, ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿರುವ ನನ್ನ ತಲೆ ಮೇಲೆ ತಕ್ಕಡಿ ಇದೆ.ಇಲ್ಲಿ ಎಲ್ಲರೂ ಸಮಾನರು, ಪ್ರತಿ ಪಕ್ಷ ಶಾಸಕರ ಹಿತರಕ್ಷಣೆಯೂ ನನ್ನ ಜವಾಬ್ದಾರಿ.ಹಾಗಾಗಿ ಮಹದೇವಪುರ ಕ್ಷೇತ್ರವನ್ನು ನಾನು ಕಾಳಜಿ ವಹಿಸಿ ಬಗೆಹರಿಸುತ್ತೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ