ಬೆಳಗಾವಿ,ಡಿ.13- ಬೆಂಗಳೂರಿನ ಬಿ.ಎಂ.ಕಾವಲಿನ 310.18 ಗುಂಟೆ ಸರ್ಕಾರಿ ಭೂಮಿ ಪರಭಾರೆ ಮಾಡಿರುವ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಗಂಭೀರ ಚರ್ಚೆಗೆ ಎಡೆಮಾಡಿಕೊಟ್ಟಿದ್ದಲ್ಲದೆ, ಸಭಾಧ್ಯಕ್ಷ ರಮೇಶ್ ಕುಮಾರ್ ಅವರು, ಸಂಬಂಧ ಪಟ್ಟ ಅಧಿಕಾರಿಯನ್ನು ಸಂಜೆಯೊಳಗೆ ಅಮಾನತು ಮಾಡುವಂತೆ ವಿನಂತಿಸಿದರು.
ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಈ ವಿಷಯ ಪ್ರಸ್ತಾಪಿಸಿದಾಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಯನ್ನು ವರ್ಗಾವಣೆ ಮಾಡುವುದಕ್ಕೆ ಸರ್ಕಾರವನ್ನು ಅಭಿನಂದಿಸಿರುವುದಾಗಿ ಹೇಳಿದರಲ್ಲದೇ, ವರ್ಗಾವಣೆಯೆಂಬುದು ಕ್ರಮವಾಗುವುದಿಲ್ಲ. ವ್ಯಾಪ್ತಿ ಮೀರಿ ಸರ್ಕಾರದ ಆಸ್ತಿಯನ್ನು ಪರಭಾರೆ ಮಾಡಿದ ಅಧಿಕಾರಿಯ ವಿರುದ್ಧ ಸಂಜೆಯೊಳಗೆ ಕ್ರಮ ಕೈಗೊಳ್ಳುವುದು ಸೂಕ್ತ. ಈ ಬಗ್ಗೆ ನಾನು ಆದೇಶಿಸುವುದಿಲ್ಲ. ವಿನಮ್ರ ಮನವಿ ಮಾಡುತ್ತೇನೆ ಎಂದರು.
ಎ.ಟಿ.ರಾಮಸ್ವಾಮಿ ಪ್ರಸ್ತಾಪಿಸಿರುವ ವಿಚಾರ ಜನರ ಹಿತದೃಷ್ಟಿಯಿಂದ ಮಹತ್ವದ ವಿಚಾರವಾಗಿದ್ದು, ಸೋಮವಾರದ ನಂತರ ವಿಶೇಷ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿ ಸತ್ಯವಾಗಿದೆ.ಜಿಲ್ಲಾಧಿಕಾರಿ ರಂಗಪ್ಪ ಅವರು ಹೊರಡಿಸಿರುವ ಆದೇಶ ಸರಿಯಿಲ್ಲ. ಅವರನ್ನು ಈಗಾಗಲೇ ವರ್ಗಾಯಿಸಲಾಗಿದೆ ಎಂದು ಸ್ಪಷ್ಟನೆ ನೀಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು ಮೇಲಿನಂತೆ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಟಿ.ರಾಮಸ್ವಾಮಿ, ಬಿ.ಎಂ.ಕಾವಲಿನ 310.18 ಗುಂಟೆ ಸರ್ಕಾರಿ ಭೂಮಿ ಪರಭಾರೆಯಾಗಿದೆ.ನಕಲಿ ದಾಖಲೆ ಸೃಷ್ಠಿ ಮಾಡಿ ಮಂಜೂರಾತಿ ಎಂದು ತೋರಿಸಲಾಗಿದೆ.ಬಡವರು ಹೊಟ್ಟೆ ಪಾಡಿಗಾಗಿ ಮಾಡಿದ್ದರೆ ಈ ಸದನದಲ್ಲಿ ವಿಷಯ ಪ್ರಸ್ತಾಪಿಸದೆ ತೊಂದರೆ ಕೊಡಬೇಡಿ ಎಂದು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತಿದ್ದೆ.ಆದರೆ ದುಷ್ಟ ದುರುಳರು ಹಣದಾಸೆಗಾಗಿ ಮಾಡಿಕೊಂಡಿದ್ದಾರೆ.ಇದೊಂದು ಬೃಹತ್ ಹಗರಣ, ಇದನ್ನು ಸಹಿಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಒಂದು ವೇಳೆ ಸದನ ಇದನ್ನು ಸಹಿಸುವುದಾದರೆ ಒಂದು ಕ್ಷಣವೂ ಇಲ್ಲಿ ರುವುದಿಲ್ಲ ಎಂದು ಹೇಳಿದರು.
ಆಗ ಸಭಾಧ್ಯಕ್ಷರು ಇದು ಮಹತ್ವದ ವಿಷಯ, ಗಂಭೀರವಾದ ವಿಷಯ ಇದನ್ನು ಚರ್ಚಿಸುವುದಾಗಿ ಹೇಳಿದರು.