ಬೆಳಗಾವಿ(ಸುವರ್ಣಸೌಧ), ಡಿ.13- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪ್ರತ್ಯೇಕವಾಗಿ ಎಲೆಕ್ಟ್ರಿಕಲ್ ಎಂಜನಿಯರ್ಗಳನ್ನು ನೇಮಿಸಬೇಕು ಎಂಬ ಬೇಡಿಕೆಯನ್ನು ಸಚಿವ ಕೃಷ್ಣಬೈರೇಗೌಡ ತಳ್ಳಿ ಹಾಕಿದರು.
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಭಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೈಗೆತ್ತಿಕೊಳ್ಳುವ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ತೀಕರಣದ ಎಸ್ಟಿಮೇಟ್ ಮಾಡಿಕೊಡಲು ಎಸ್ಕಾಂಗಳು ವಿಳಂಬ ಮಾಡುತ್ತಿವೆ. ಅದಕ್ಕಾಗಿ ಇಲಾಖೆಗಾಗಿಯೇ ಪ್ರತ್ಯೇಕವಾಗಿ ಎಲೆಕ್ಟ್ರಿಕಲ್ ಇಂಜನಿಯರ್ಗಳನ್ನು ನೇಮಿಸಿ ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರ ನೀಡಿದ ಇಲಾಖೆಯ ಸಚಿವ ಕೃಷ್ಣಬೈರೇಗೌಡ, ಎಸ್ಟಿಮೇಟ್ಗಳನ್ನು ಎಸ್ಕಾಂಗಳ ಸಹಕಾರದಿಂದಲೇ ಸಿದ್ದಪಡಿಸುತ್ತಿದ್ದೇವೆ. ಈವರೆಗೂ ಯಾವುದೇ ತೊಂದರಯಾಗಿಲ್ಲ. ಭಂಟ್ವಾಳ ಕ್ಷೇತ್ರದಲ್ಲಿ ಸಮಸ್ಯೆ ಇದ್ದರೆ ಅದನ್ನು ತಾವೇ ಜವಾಬ್ದಾರಿಗೆ ತೆಗೆದುಕೊಂಡು ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರು ಕುಡಿಯುವ ನೀರಿನ ಯೋಜನೆಯ ನೀಲನಕ್ಷೆ ಮತ್ತು ಇತರೆ ಮಾಹಿತಿಗಳನ್ನು ಗ್ರಾಮ ಪಂಚಾಯ್ತಿ ಪಿಡಿಒಗಳಿಗೂ ಒದಗಿಸುವಂತೆ ಸಲಹೆ ನೀಡಿದರು.
ಈಗ ಪಿಡಿಒಗಳಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಯೋಜನೆಗಳ ಬಗ್ಗೆ ಅವರಿಗೆ ವಿವರಗಳೇ ಇಲ್ಲ ಎಂದು ಹೇಳಿದರು.ಈ ಸಲಹೆ ಉತ್ತಮವಾಗಿದ್ದು, ಅದನ್ನು ಪರಿಶೀಲಿಸುವಂತೆ ಸ್ಪೀಕರ್ ಸಲಹೆ ನೀಡಿದರು.