ಬೆಳಗಾವಿ(ಸುವರ್ಣಸೌಧ), ಡಿ.13- ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ ಗೇಟ್ಗಳನ್ನು ಮರಳುಮಾಫಿಯಾದವರು ಒಡೆದು ಹಾಕುತ್ತಿದ್ದಾರೆ. ಅವುಗಳ ರಕ್ಷಣೆಗೆ ಪೊಲೀಸರನ್ನು ನೇಮಿಸಿ ಎಂದು ಮುಧೋಳ ಕ್ಷೇತ್ರದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಮನವಿ ಮಾಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣತಿ, ಉಮಾರಾಣಿ, ಉಮ್ಮರಜ್ ಬ್ಯಾರೇಜ್ಗಳಿಂದ ನೀರು ಸೋರಿ ಹೊರ ಹೋಗುತ್ತಿರುವುದನ್ನು ಶಾಸಕರು ಸರ್ಕಾರದ ಗಮನಕ್ಕೆ ತಂದರು.
ಉಮಾರಾಣಿ ಬ್ಯಾರೇಜ್ನಲ್ಲಿ ನೀರು ಸೋರಿಕೆಯಾಗುತ್ತಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ಒಪ್ಪಿಕೊಂಡಿದ್ದಾರೆ.ಮರಳು ಮಾಫಿಯದವರು ನೀರು ಬೇಗ ಖಾಲಿಯಾಗಲಿ ಎಂಬ ಕಾರಣಕ್ಕಾಗಿ ಬ್ಯಾರೇಜ್ಗಳಿಗೆ ತೂತು ಮಾಡುತ್ತಿದ್ದಾರೆ.ಅವುಗಳ ರಕ್ಷಣೆಗೆ ಪೊಲೀಸರನ್ನು ನೇಮಿಸಿ ಎಂದು ಒತ್ತಾಯಿಸಿದರು.
ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು, ಸೋರಿಕೆಯಾಗುತ್ತಿರುವ ಉಮಾರಾಣಿ ಬ್ಯಾರೇಜ್ಗೆ ಹೊಸ ಗೇಟ್ ಅಳವಡಿಸಲು 125 ಕೋಟಿ ಬಿಡುಗಡೆಯಾಗಿದ್ದು, 15ರಿಂದ 20 ದಿನಗಳಲ್ಲಿ ಕೆಲಸ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.