ಬೆಳಗಾವಿ, ಡಿ.13-ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡುವ ಚಿಂತನೆ ನಡೆಸಿರುವುದು ರಾಜಕೀಯ ಸ್ಟಂಟ್ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ಲಕ್ಷ ಕೋಟಿ ರೂ.ಸಾಲ ಮನ್ನಾ ಮಾಡುವ ಪ್ರಸ್ತಾಪ ಮಾಡಲಾಗುತ್ತಿದೆ. ಇದು ಚುನಾವಣೆಯ ಸ್ಟಂಟ್ ಅಲ್ಲದೆ ಮತ್ತೇನು ಅಲ್ಲ. ಈಗಾಗಲೇ ಸಾವಿರಾರು ರೈತರು ಸಾಲದ ಸುಳಿಗೆ ಸಿಲುಕಿ ಮೃತ ಪಟ್ಟಿದ್ದಾರೆ. ಮೊದಲೇ ಸಾಲ ಮನ್ನಾ ಮಾಡುವ ತೀರ್ಮಾನ ಮಾಡಿದ್ದರೆ ಸಾವಿರಾರು ರೈತರ ಪ್ರಾಣವಾದರೂ ಉಳಿಯುತ್ತಿತ್ತು ಎಂದರು.
ಈ ಹಿಂದೆ ಯುಪಿಎ ಸರ್ಕಾರ 72ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಅದರಂತೆ ಕರ್ನಾಟಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸುಮಾರು 40 ಸಾವಿರ ಕೋಟಿ ಸಾಲ ಮನ್ನಾ ಮಾಡುವಂತೆ ಪ್ರಧಾನಿಯವರಿಗೆ ಮನವಿ ಮಾಡಲು ನಿಯೋಗವನ್ನು ಕರೆದೊಯ್ದರೂ, ಸ್ಪಂದಿಸದ ಮೋದಿಯವರು ಚುನಾವಣೆ ಹತ್ತಿರವಾಗುತ್ತ್ತಿದ್ದಂತೆ ಸಾಲ ಮನ್ನಾ ಪ್ರಸ್ತಾಪ ಮಾಡುತ್ತಿರುವುದು ರಾಜಕೀಯ ಸ್ಟಂಟ್ ಅಲ್ಲದೆ ಮತ್ತೇನು ಅಲ್ಲ ಎಂದು ವಾಗ್ದಾಳಿ ನಡೆಸಿದರು.