ಬೆಳಗಾವಿ,ಡಿ.13-ಶೂನ್ಯವೇಳೆಯಲ್ಲಿ ಬಿಜೆಪಿಯ ಪ್ರಾಣೇಶ್ ಅವರು ವಿಷಯ ಪ್ರಸ್ತಾಪಿಸಿ, ನ್ಯಾಯಬೆಲೆ ಅಂಗಡಿಗಳಲ್ಲಿ ಇಂದು ವ್ಯಾಪಕ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅಕ್ಕಿಯ ಜೊತೆ ಎಣ್ಣೆ, ಬೇಳೆ, ಸೋಪು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕೆಂದು ಸಾರ್ವಜನಿಕರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಸದನದ ಗಮನ ಸೆಳೆದರು.
ಅಕ್ಕಿ ತೆಗೆದುಕೊಳ್ಳದಿದ್ದರೆ ಬೇಳೆ, ಎಣ್ಣೆ, ಸೋಪು ಕೊಡುವುದಿಲ್ಲ ಎನ್ನುವುದು, ನಮೂದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದು, ಅಳತೆಯಲ್ಲಿ ಮೋಸ ಸೇರಿದಂತೆ ನಾನಾ ರೀತಿಯ ಅಕ್ರಮಗಳು ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುತ್ತಿವೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಾಣೇಶ್ ಒತ್ತಾಯಿಸಿದರು.
ಈ ವೇಳೆ ಸದನದಲ್ಲಿದ್ದ ಸಚಿವ ಯು.ಟಿ.ಖಾದರ್, ನ್ಯಾಯಾಬೆಲೆ ಅಂಗಡಿಗಳಲ್ಲಿ ಅಕ್ರಮ ನಡೆಯುತ್ತಿದ್ದರೆ ಸರ್ಕಾರ ಹೋಗಿ ಅಂಗಡಿಗಳ ಮುಂದೆ ನಿಲ್ಲುವುದಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದಾಗ, ಪ್ರತಿಪಕ್ಷದ ಸದಸ್ಯರು ಸಚಿವರ ಮೇಲೆ ಮುಗಿಬಿದ್ದರು.
ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಅರುಣ್ ಶಹಪುರ್, ಪ್ರಾಣೇಶ್ ಸೇರಿದಂತೆ ಅನೇಕರು, ನೀವು ನಿಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ಕೊಡಿ. ಅಕ್ರಮಗಳನ್ನು ತಡೆಗಟ್ಟಲು ಸಾಧ್ಯವಾಗದಿದ್ದರೆ ನೀವು ಸಚಿವ ಸ್ಥಾನದಲ್ಲಿ ಏಕೆ ಮುಂದುವರೆಯಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಗ್ರಾಮ ಪಂಚಾಯ್ತಿ ಸದಸ್ಯರು, ತಾಲ್ಲೂಕು, ಜಿಲ್ಲಾ ಪಂಚಾಯತ್ ಸೇರಿದಂತೆ ಜನಪ್ರತಿನಿಧಿಗಳು ಆಗಾಗ್ಗೆ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ಕೊಟ್ಟು ಅಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಗಮನಹರಿಸಬೇಕೆಂದು ನಾನು ಹೇಳಿರುವುದಾಗಿ ಖಾದರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಮುಂದಾದರು.
ಆದರೆ ಪ್ರತಿಪಕ್ಷದ ಸದಸ್ಯರು ಖಾದರ್ ಹೇಳಿಕೆ ಆಕ್ಷೇಪಿಸಿ ಈ ರೀತಿ ಹೇಳುವುದು ಸರಿಯಲ್ಲ ಎಂದರು.