ಬೆಂಗಳೂರು, ಡಿ.13-ಬಿಬಿಎಂಪಿ 12 ಸ್ಥಾಯಿಸಮಿತಿಗಳ ಅಧ್ಯಕ್ಷರು ನಾಳೆ ಆಯ್ಕೆಯಾಗಲಿದ್ದು, ಮರುದಿನವೇ ಶೂನ್ಯ ಮಾಸ ಆರಂಭವಾಗುವುದರಿಂದ ಆಯ್ಕೆಯಾದ ದಿನವೇ ನೂತನ ಅಧ್ಯಕ್ಷರು ತಮ್ಮ ಕಚೇರಿ ಪೂಜೆ ನೆರವೇರಿಸಲು ಸಿದ್ದತೆ ನಡೆಸಿದ್ದಾರೆ.
ಮೇಯರ್ ಗಂಗಾಭಿಕೆ ಅಧ್ಯಕ್ಷತೆಯಲ್ಲಿ ನಾಳೆ ನಡೆಯಲಿರುವ ಪಾಲಿಕೆ ಸಭೆಯಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಹೇಮಲತಾ ಗೋಪಾಲಯ್ಯ, ಸಾಮಾಜಿಕ ನ್ಯಾಯ ಸಮಿತಿಗೆ ಪಿ.ಸೌಮ್ಯಾ ಶಿವಕುಮಾರ್, ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಗೆ ಉಮೇ ಸಲ್ಮಾ, ಶಿಕ್ಷಣ ಸ್ಥಾಯಿ ಸಮಿತಿಗೆ ಇಮ್ರಾನ್ ಪಾಷ, ತೋಟಗಾರಿಕೆಗೆ ಐಶ್ವರ್ಯಾ ನಾಗರಾಜ್, ಅಪೀಲು ಸ್ಥಾಯಿ ಸಮಿತಿಗೆ ಸುಜಾತ ರಮೇಶ್, ಆರೋಗ್ಯ ಸ್ಥಾಯಿಸಮಿತಿಗೆ ಮುಜಾಯಿದ್ದೀನ್ ಪಾಷ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಆಯ್ಕೆಯಾಗಲಿದ್ದಾರೆ.
ಕೇವಲ 9 ಮಂದಿ ಸದಸ್ಯರಿರುವ ನಗರಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬೈರಸಂದ್ರ ವಾರ್ಡ್ನ ನಾಗರಾಜ್ ಆಯ್ಕೆಯಾಗುವ ಸಾಧ್ಯತೆ ಇದೆ.ಒಂದು ವೇಳೆ ನಾಗರಾಜ್ ಆಯ್ಕೆಗೆ ಕಾನೂನು ತೊಡಕು ಎದುರಾದರೆ ಕೇವಲ 11 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ಮಧ್ಯಾಹ್ನದ ವೇಳೆಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಮರು ದಿನದಿಂದಲೇ ಶೂನ್ಯ ಮಾಸ ಆರಂಭವಾಗುತ್ತಿರುವುದರಿಂದ ಅಧ್ಯಕ್ಷರಾಗಿ ನಿಯೋಜನೆಗೊಂಡ ದಿನವೇ ಕಚೇರಿ ಪೂಜೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.ಹೀಗಾಗಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ನಿಯೋಜನೆಗೊಂಡವರು ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ತರಾತುರಿಯಲ್ಲಿ ಕಚೇರಿ ಪೂಜೆ ನೆರವೇರಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಉಪಮೇಯರ್ ಆಗಿ ಆಯ್ಕೆಯಾಗಿರುವ ನಾಗಪುರ ವಾರ್ಡ್ನ ಬಿಬಿಎಂಪಿ ಸದಸ್ಯ ಬಿ.ಭದ್ರೇಗೌಡ ಅವರು ನಾಳೆ ತಮ್ಮ ಕಚೇರಿ ಪೂಜೆ ನೆರವೇರಿಸುತ್ತಿದ್ದಾರೆ.