ಉಗ್ರ ಸಂಘಟನೆ ಸೇರಿದ್ದ ಹೈದರ್ ಚಿತ್ರದಲ್ಲಿ ನಟಿಸಿದ್ದ ಯುವಕ; ಎನ್ ಕೌಂಟರ್ ಗೆ ಬಲಿ

ಶ್ರೀನಗರ: ಬಾಲಿವುಡ್ ನ ಹೈದರ್​ ಚಿತ್ರದಲ್ಲಿ ನಟಿಸಿದ್ದ ಯುವಕ ಉಗ್ರ ಸಂಘಟನೆಗೆ ಸೇರಿ ಈಗ ಭದ್ರತಾ ಪಡೆಯ ಎನ್​ಕೌಂಟರ್​ಗೆ ಬಲಿಯಾಗಿದ್ದಾನೆ.

11ನೇ ತರಗತಿಯ ಸಾಖಿಬ್​​ ಬಿಲಾಲ್ ಗುಂಡೇಟಿಗೆ ಬಲಿಯಾದ ಬಾಲಕ. ಆಗಸ್ಟ್​ 31ರಂದು 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕನೊಂದಿಗೆ ನಾಪತ್ತೆಯಾಗಿದ್ದ ಬಿಲಾಲ್, ಡಿ.9ರಂದು ಶ್ರೀನಗರದ ಹೊರವಲಯದಲ್ಲಿ ಉಗ್ರರು ಹಾಗೂ ಭದ್ರತಾ ಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನಿ ಲಷ್ಕರ್​-ಎ-ತೊಯ್ಬಾ ಸಂಘಟನೆ ಉಗ್ರರ ಜತೆ ಎನ್​ಕೌಂಟರ್​ಗೆ ಬಲಿಯಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಬಿಲಾಲ್​ ಕುಟುಂಬಕ್ಕೆ ತಮ್ಮ ಮಗ ಉಗ್ರ ಸಂಘಟನೆ ಏಕೆ ಸೇರಿದ ಎಂಬ ಗೊಂದಲ ಮೂಡಿದೆ. ಪುತ್ರ ಕಾಣೆಯಾದಾಗಿನಿಂದಲೂ ಮೃತ ಬಿಲಾಲ್​ ತಾಯಿ ಆತನನ್ನು ಎಲ್ಲೆಡೆ ಹುಡುಕಾಡಿದ್ದಾರೆ. ಮಗ ಸುರಕ್ಷಿತವಾಗಿ ಮನೆಗೆ ಹಿಂದಿರುಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ತಾಯಿತವನ್ನೂ ತಂದಿಟ್ಟಿದ್ದರು.

‘ಬಿಲಾಲ್​ಗೆ ಇಂಜಿನಿಯರಿಂಗ್​ ಮಾಡಬೇಕೆಂಬ ಆಸಕ್ತಿಯಿತ್ತು. ಅವನು ಮನೆ ಬಿಟ್ಟು ಹೋದ ದಿನ ದಿನಸಿ ತರಲು ಹೊರ ಹೋಗಿದ್ದ. ಆದರೆ, ಯಾರದ್ದೋ ಬೈಕ್​ ಮೇಲೆ ಇಬ್ಬರೂ ಬಾಲಕರು ಕುಳಿತುಕೊಂಡು ಹೋಗಿರುವುದನ್ನು ಸ್ಥಳೀಯರು ನೋಡಿದ್ದಾರೆ. ಆತ ಉಗ್ರರ ಗುಂಪು ಸೇರಿದ್ದೇಕೆ ಎಂಬುದು ತಿಳಿಯುತ್ತಿಲ್ಲ ಎಂದು ಬಿಲಾಲ್​ನ ಸೋದರ ಮಾವ ಆಸಿಂ ಐಜಾಝ್​ ತಿಳಿಸಿದ್ದಾರೆ.

ಹತ್ತನೇ ತರಗತಿಯಲ್ಲಿ ಡಿಸ್ಟಿಂಕ್ಷನ್​ನಲ್ಲಿ ತೇರ್ಗಡೆಯಾಗಿದ್ದ ಬಿಲಾಲ್​, 11ನೇ ತರಗತಿಯಲ್ಲಿ ಫಿಸಿಕ್ಸ್​, ಕೆಮಿಸ್ಟ್ರಿ ಮತ್ತು ಗಣಿತ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದ. ಫುಟ್​ಬಾಲ್​ ಅಭಿಮಾನಿಯಾಗಿದ್ದ ಬಿಲಾಲ್​ ಟೆಕ್ವಾಂಡೊ ಮತ್ತು ಕಬ್ಬಡಿ ಆಟಗಾರನಾಗಿದ್ದ. ಬಿಲಾಲ್​ ಜತೆ ತೆರಳಿದ್ದ ಮತ್ತೊಬ್ಬ ಬಾಲಕ ಬಡ ಕುಟುಂಬದವನಾಗಿದ್ದ ಎಂದು ತಿಳಿಸಿದ್ದಾರೆ.

ಬಿಲಾಲ್​ ಮತ್ತು ಆತನ ಜತೆಗಿದ್ದ ಬಾಲಕ ಕಣ್ಮರೆಯಾದ ದಿನವೇ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Kashmiri teen,a cameo in film Haider, turned militant, shot dead in encounter

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ