ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೂರು ರಾಜ್ಯಗಳ ಗೆಲುವಿನ ಮೂಲಕ ತಾಯಿ ಸೋನಿಯಾ ಗಾಂಧಿಯವರಿಗೆ ಉಡುಗೋರೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
2017ರ ಡಿಸೆಂಬರ್ 11 ರಂದು ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅದೇ ಡಿಸೆಂಬರ್ 11ಕ್ಕೆ ಸರಿಯಾಗಿ ಒಂದು ವರ್ಷ ತುಂಬುವ ದಿನದಂದೇ ಕಾಂಗ್ರೆಸ್, ಬಿಜೆಪಿ ಅಧಿಕಾರದ 3 ರಾಜ್ಯಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಡಿಸೆಂಬರ್ 11 ನಿರ್ಣಾಯಕ ದಿನವಾಗಿದೆ ಅಂತ ಪ್ರಶಂಸಿಸಲಾಗಿದೆ. ಡಿಸೆಂಬರ್ 9 ಸೋನಿಯಾ ಗಾಂಧಿ ಬರ್ತ್ ಡೇ ಆಗಿರೋದ್ರಿಂದ ಪುತ್ರ ರಾಹುಲ್ ಗಾಂಧಿ ಬರ್ತ್ ಡೇ ಗಿಫ್ಟ್ ನೀಡಿದ್ದಾರೆ ಎನ್ನಲಾಗ್ತಿದೆ.
ರಾಹುಲ್ ಗಾಂಧಿ ಹೋದಲ್ಲಿ ಬಂದಲ್ಲಿ ರಫೇಲ್ ಡೀಲ್ ಹಗರಣ ಪ್ರಸ್ತಾಪ ಮಾಡುವ ಮೂಲಕ ಮೋದಿ ವಿರೋಧಿ ಅಲೆಯನ್ನ ಬಡಿದೆಬ್ಬಿಸಿದ್ರು. ಕಾಂಗ್ರೆಸ್ ಗೆಲುವಿಗೆ ಸೋನಿಯಾ ಗಾಂಧಿ ಸಂತಸ ವ್ಯಕ್ತಪಡಿಸಿದ್ದಾರೆ. ಪುತ್ರ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಕಠಿಣ ಪರಿಶ್ರಮದ ಮೂಲಕ ಪಕ್ಷವನ್ನು ಮುನ್ನಡೆಸಿದ್ದರು. ಆ ಪರಿಶ್ರಮದಿಂದಲೇ ಬಿಜೆಪಿಯ 3 ಕೋಟೆಗಳನ್ನು ಗೆದ್ದಿದ್ದೇವೆ ಅಂತ ಸೋನಿಯಾ ಗಾಂಧಿ ಬಣ್ಣಿಸಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್, ಕಾಂಗ್ರೆಸ್ಸನ್ನು ಬೆಂಬಲಿಸಿದ ಎಲ್ಲಾ ಮತದಾರರಿಗೂ ಅಭಿನಂದನೆ ಸಲ್ಲಿಸುತ್ತೇವೆ. ವಿಶೇಷವಾಗಿ ಈ ಕಾಂಗ್ರೆಸ್ ಗೆಲುವನ್ನು ದೇಶದ ರೈತರು, ಕಾರ್ಯಕರ್ತರು ಹಾಗೂ ದುಡಿಯುವ ಕೈಗಳಿಗೆ ಅರ್ಪಿಸುತ್ತೇನೆಂದು ಹೇಳಿದ್ದರು. ಆದ್ರೆ ಇದೀಗ ಕಾಂಗ್ರೆಸ್ ಗೆಲುವನ್ನು ತಾಯಿಗೆ ಅರ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಸತತವಾಗಿ ನಡೆಸಿದ ಟೆಂಪಲ್ ರನ್, ಬಿಜೆಪಿ ಹಿಡಿತದಲ್ಲಿದ್ದ ಛತ್ತೀಸ್‍ಗಢ ಮತ್ತು ರಾಜಸ್ಥಾನವನ್ನ ಗೆಲ್ಲುವಲ್ಲಿ ಯಶಸ್ವಿಯಾದರು. ಇನ್ನೊಂದೆಡೆ ಶಿವಭಕ್ತನಾದ ರಾಹುಲ್ ನಡೆಯನ್ನ ಮಧ್ಯಪ್ರದೇಶದ ಮತದಾರರು ಒಪ್ಪಿದಂತಿದೆ.