ಬಫರ್ ಝೋನ್ ಕಡ್ಡಾಯ, ನಿಯಮವನ್ನು ಯಾರು ಪಾಲಿಸುತ್ತಿಲ್ಲ

ಬೆಂಗಳೂರು, ಡಿ.12-ಬೆಂಗಳೂರು ಮಹಾನಗರ ವ್ಯಾಪ್ತಿಯ ಎಲ್ಲಾ ಕಾಲುವೆಗಳ ಸುತ್ತ 75ಮೀಟರ್ ಬಫರ್‍ಝೋನ್ ಬಿಡುವ ಕ್ರಮ ಕಡ್ಡಾಯಗೊಳಿಸಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಗಂಭೀರ ಚಿಂತನೆ ನಡೆಸಿರುವುದು ರಾಜಕಾಲುವೆಗಳ ಒತ್ತುವರಿದಾರರಿಗೆ ಬಿಗ್ ಶಾಕ್ ನೀಡಿದೆ.

ಯಾವುದೇ ಕಾಲುವೆ ಸುತ್ತ 75 ಮೀಟರ್ ಬಫರ್‍ಝೋನ್ ಬಿಡುವುದನ್ನು ಕಡ್ಡಾಯ ಮಾಡಿ ಶೀಘ್ರ ಕಾನೂನು ಜಾರಿಗೊಳಿಸಲು ಎನ್‍ಜಿಟಿ ಚಿಂತನೆ ನಡೆಸಿದೆ.
ಈವರೆಗೆ ಪ್ರೈಮರಿ ಡ್ರೈನೇಜ್‍ಗೆ 75 ಮೀಟರ್ ಕಡ್ಡಾಯವಾಗಿತ್ತು. ಅದೇ ರೀತಿ ಸೆಕೆಂಡರಿ ಡ್ರೈನೇಜ್‍ಗೆ 50 ಮೀಟರ್, ಪ್ರಿಲಿಮನರಿ ಡ್ರೈನೇಜ್‍ಗೆ 25 ಮೀಟರ್ ಬಫರ್‍ಝೋನ್ ಬಿಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇದೀಗ ಎಲ್ಲಾ ಕಾಲುವೆಗಳ ಸುತ್ತ 75 ಮೀಟರ್ ಬಫರ್‍ಝೋನ್ ಕಡ್ಡಾಯಗೊಳಿಸಲು ಹಸಿರು ನ್ಯಾಯಾಧೀಕರಣ ಮುಂದಾಗಿದೆ.

ಬಫರ್‍ಝೋನ್ ಕಡ್ಡಾಯಗೊಳಿಸಿದ್ದರೂ ಯಾರೂ ನಿಯಮಗಳನ್ನು ಪಾಲಿಸುತ್ತಿಲ್ಲ. ನ್ಯಾಯಾಧೀಕರಣ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.ಆದರೆ, ಅಧಿಕಾರಿಗಳು ರಂಗೋಲಿ ಕೆಳಗೆ ನುಸುಳುವ ಕೆಲಸ ಮಾಡುತ್ತಿದ್ದಾರೆ. ಪ್ರೈಮರಿ ಡ್ರೈನೇಜ್, ಸೆಕೆಂಡರಿ ಹಾಗೂ ಪ್ರಿಲಿಮನರಿ ಡ್ರೈನೇಜ್ ಎಂಬ ನೆಪ ಹೇಳಿ ಕಾಲುವೆಗಳ ಒತ್ತುವರಿಗೆ ಸಹಕಾರಿಯಾಗಿದ್ದಾರೆ ಎನ್ನಲಾಗಿದೆ.

ರಾಜಕಾಲುವೆಗಳ ಒತ್ತುವರಿಯಿಂದ ಮಳೆಗಾಲದಲ್ಲಿ ಭಾರೀ ಅನಾಹುತಗಳು ಸಂಭವಿಸುತ್ತವೆ. ಅಲ್ಲದೆ, ಈ ಎಲ್ಲಾ ಹಿನ್ನೆಲೆಯಲ್ಲಿ ಎಲ್ಲಾ ಕಾಲುವೆಗಳನ್ನು ಒಂದೇ ವ್ಯಾಪ್ತಿಗೆ ತಂದು 75 ಮೀಟರ್ ಬಫರ್‍ಝೋನ್ ಬಿಡಬೇಕೆಂಬ ಮಹತ್ವದ ನಿರ್ಧಾರ ಸದ್ಯದಲ್ಲೇ ಕೈಗೊಳ್ಳುವ ಸಾಧ್ಯತೆ ಇದೆ.

ಈ ನಿಯಮ ಜಾರಿಗೆ ಬಂದರೆ ರಾಜಕಾಲುವೆಗಳು ಹಾಗೂ ಕಾಲುವೆಗಳ ಅಕ್ಕಪಕ್ಕದಲ್ಲಿ ಇರುವ ಕಟ್ಟಡಗಳು ಅಲುಗಾಡುವುದು ಗ್ಯಾರಂಟಿ. ಇದರಿಂದ ಶೇ.40ರಷ್ಟು ಮನೆಗಳಿಗೆ ಆತಂಕ ಕಟ್ಟಿಟ್ಟ ಬುತ್ತಿ. ಸಿಟಿಯಲ್ಲಿ ಹೊಸದಾಗಿ ಮನೆ ಕಟ್ಟುವವರಿಗೂ ಈ ನಿಯಮ ಮಾರಕವಾಗುತ್ತದೆ.ಎನ್‍ಜಿಟಿಯಿಂದ ಈ ನಿಯಮ ಜಾರಿಯಾಗುತ್ತಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಬಿಬಿಎಂಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.

ರಾಜಕಾಲುವೆಗಳ ಅಕ್ಕಪಕ್ಕ ನಿವೇಶನಗಳನ್ನು ಹೊಂದಿರುವವರು ಹೇಗಾದರೂ ಮಾಡಿ ಪ್ಲ್ಯಾನ್ ತೆಗೆದುಕೊಂಡು ಎನ್‍ಜಿಟಿ ಆದೇಶ ಜಾರಿಯಾಗುವುದರೊಳಗೆ ಮನೆ ಕಟ್ಟಬೇಕು ಎಂಬ ಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿ ಅಧಿಕಾರಿಗಳ ದುಂಬಾಲು ಬಿದ್ದಿದ್ದಾರೆ.

ಬಿಬಿಎಂಪಿಯ ನಗರ ಯೋಜನೆ ವಿಭಾಗ ಕಿಕ್ಕಿರಿದು ತುಂಬಿದೆ. ಮನೆ ಕಟ್ಟಿದ ಮೇಲೆ ಒಡೆಯಲು ಸಾಧ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ಈ ಎಲ್ಲಾ ಸಾಹಸಗಳನ್ನು ಜನ ಮಾಡುತ್ತಿದ್ದಾರೆ. ಒಂದು ವೇಳೆ ಎನ್‍ಜಿಟಿ ನಿಯಮ ಜಾರಿಗೆ ಬಂದು ಬಫರ್‍ಝೋನ್ ಒಳಗಿರುವ ಹಳೆಯ ಕಟ್ಟಡಗಳನ್ನು ಒಡೆದು ಹಾಕಬೇಕು ಎಂದು ಹೇಳಿದರೆ ನಗರದಲ್ಲಿರುವ ಸಾವಿರಾರು ಕಟ್ಟಡಗಳು ನೆಲಸಮವಾಗುವುದು ಗ್ಯಾರಂಟಿ. ಆದರೆ, ಎನ್‍ಜಿಟಿಯ ಈ ನಿಯಮ ಯಾವ ರೂಪದಲ್ಲಿರುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆಗಲೇ ಜನ ಕಟ್ಟಡಗಳನ್ನು ಕಟ್ಟಿಕೊಳ್ಳಲು, ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಎನ್‍ಜಿಟಿ ನಿಯಮ ಜಾರಿಯಾದರೆ ಏನಾಗುವುದೋ ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ