ಬಿಡಿಎಯಿಂದ ತಮಗೆ ವಂಚಿತವಾಗಿರುವ ನಿವೇಶನವನ್ನು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಗೆ ಒಪ್ಪಿಸಿ, ಸ್ವಾಮೀಜಿ ಇಂದ್ರಜಿತ್

ಬೆಂಗಳೂರು, ಡಿ.11- ಬಿಡಿಎ ತಮಗೆ ವಂಚಿಸಿರುವ 22 ಕೋಟಿ ಮೌಲ್ಯದ ನಿವೇಶನವನ್ನು ಈ ಕೂಡಲೇ ವಶಕ್ಕೆ ಪಡೆದು ಆ ನಿವೇಶನವನ್ನು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಗೆ ಒಪ್ಪಿಸುವಂತೆ ವಲ್ರ್ಡ್ ಪೀಸ್ ಮ್ಯಾನ್ ಟ್ರಸ್ಟ್ ಸ್ವಾಮೀಜಿ ಇಂದ್ರಜಿತ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

1980ರಲ್ಲಿ ಆರ್‍ಪಿಸಿ ಬಡಾವಣೆಯಲ್ಲಿ ಬಿಡಿಎಯಿಂದ ನನಗೆ 40×90 ಅಳತೆಯ ನಿವೇಶನ ಮಂಜೂರಾಗಿತ್ತು. ಈ ಸಂದರ್ಭದಲ್ಲಿ ನಾನು ವಿಶ್ವಶಾಂತಿಗಾಗಿ ಸುಮಾರು ವರ್ಷಗಳ ಕಾಲ ವಿವಿಧ ದೇಶಗಳಿಗೆ ಕಾಲ್ನಡಿಗೆಯಲ್ಲಿ ತೆರಳಿದ್ದೆ.

ಪ್ರವಾಸದಿಂದ ನಾನು ಹಿಂದಿರುಗಿದಾಗ ನನಗೆ ಮಂಜೂರಾಗಿದ್ದ ನಿವೇಶನ ನೀಡಲು ಬಿಡಿಎ ಮೀನಾಮೇಷ ಎಣಿಸಿತ್ತು. ಬಿಡಿಎ ಅಧಿಕಾರಿಗಳ ಈ ಧೋರಣೆ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದೆ. ನನ್ನ ದೂರಿನ ಮೇರೆಗೆ ಮುಖ್ಯಮಂತ್ರಿಗಳು ಉಪಕಾರ್ಯದರ್ಶಿ ಅರುಣ್ ಪುರ್ಟಾರ್ಡೋ ಅವರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಸಿಎಂ ಸೂಚನೆ ಮೇರೆಗೆ ಅರುಣ್ ಪುರ್ಟಾರ್ಡೋ ಅವರು ಬಿಡಿಎ ಅಧ್ಯಕ್ಷರಿಗೆ ಪತ್ರ ಬರೆದು ಇಂದ್ರಜಿತ್ ಸ್ವಾಮೀಜಿ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದರು.

ಆದರೆ, ಅವರ ಮನವಿಗೂ ಮನ್ನಣೆ ನೀಡದ ಬಿಡಿಎ ಅಧ್ಯಕ್ಷರು ನಿವೇಶನ ವಂಚನೆಯಾಗಿರುವ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ ಎಂದು ಬೇಕಾಬಿಟ್ಟಿ ಉತ್ತರ ನೀಡಿದ್ದರು.

ನಿವೇಶನ ನನ್ನ ಹೆಸರಿಗೆ ಹಂಚಿಕೆಯಾಗಿರುವಾಗ ಕೋರ್ಟ್‍ಗೆ ಹೋಗುವ ಪ್ರಮೇಯವೇ ಬರುವುದಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಹಾಗೂ ಬಿಡಿಎ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಂದ್ರಜಿತ್ ಸ್ವಾಮೀಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ