ಬೆಳಗಾವಿ(ಸುವರ್ಣಸೌಧ), ಡಿ.11-ಗ್ರಾಮೀಣ ಭಾಗದಲ್ಲಿ ಕೃಷಿಗೆ ಪ್ರತಿದಿನ 10 ಗಂಟೆ ವಿದ್ಯುತ್ ನೀಡಲು ಗಂಭೀರ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ಸಿರಗುಪ್ಪ ಕ್ಷೇತ್ರದ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪ ಅವರ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ಕುಮಾರಸ್ವಾಮಿಯವರು, ರಾಜ್ಯದ ಕೆಲವು ಭಾಗಗಳಿಗೆ ದಿನದ 10 ಗಂಟೆ ವಿದ್ಯುತ್ ನೀಡಲು ಸರ್ಕಾರ ಮುಂದಾಗಿತ್ತು.ಆದರೆ ನಿರಂತರವಾಗಿ ಬೋರ್ವೆಲ್ ಓಡುತ್ತಿದ್ದರೆ, ನೀರು ಖಾಲಿಯಾಗುತ್ತದೆ, ಅಂತರ್ಜಲ ಬತ್ತಿ ಹೋಗುತ್ತದೆ ಎಂದು ರೈತರೇ ನಿರಂತರ ವಿದ್ಯುತ್ ಬೇಡ ಎಂದು ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ಕೆಲವು ಭಾಗಗಳಲ್ಲಿ ನಿರಂತರ ವಿದ್ಯುತ್ ಕೊಡುತ್ತಿಲ್ಲ ಎಂದರು.
ಈಗ ದಿನಕ್ಕೆ 7 ಗಂಟೆ ಕಾಲ ಕೃಷಿಗೆ 3 ಫೇಸ್ ವಿದ್ಯುತ್ ನೀಡಲಾಗುತ್ತಿದೆ. ನಿರಂತರ ಜ್ಯೋತಿ ಯೋಜನೆ ಪೂರ್ಣಗೊಂಡಿರುವ ಕಡೆ ದಿನದ 20 ರಿಂದ 22 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದೆ. ಗುಣಮಟ್ಟ ಹೆಚ್ಚಿಸಲು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.
ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯ ಭೀಕರ ಬರಗಾಲದಿಂದ ನರಳುತ್ತಿದೆ.7 ಗಂಟೆ ಬದಲಾಗಿ ದಿನದ 10 ಗಂಟೆ 3 ಫೇಸ್ ವಿದ್ಯುತ್ ನೀಡಿ ಎಂದು ಹೇಳಿದರು.
ಆಡಳಿತ ಪಕ್ಷದ ಶಾಸಕರೊಬ್ಬರು 7 ಗಂಟೆ ನಿರಂತರ ವಿದ್ಯುತ್ ಪೂರೈಸುವ ಬದಲಾಗಿ ಬೆಳಗ್ಗೆ 4 ಗಂಟೆ ಕಾಲ, ರಾತ್ರಿ 3 ಗಂಟೆ ಕಾಲ 3 ಫೇಸ್ ವಿದ್ಯುತ್ ಪೂರೈಸುವುದು ಸೂಕ್ತ ಎಂದು ಹೇಳಿದರು.
ಪ್ರತಿಪಕ್ಷದ ಸಲಹೆಗೆ ಸಭಾಧ್ಯಕ್ಷ ರಮೇಶ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.