ಬೆಳಗಾವಿ, ಡಿ.11- ರಾಜ್ಯದಲ್ಲಿ ಎದುರಾಗಿರುವ ಬರಗಾಲವನ್ನು ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ವಿಧಾನಪರಿಷತ್ನ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನಿಯಮ 68ರಡಿ ಬರಗಾಲ ಕುರಿತು ಮಾತನಾಡಿದ ಅವರು, 100ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿದೆ. ಕುಡಿಯಲು ನೀರು, ಜಾನುವಾರುಗಳಿಗೆ ಮೇವು, ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜನರು ಗುಳೇ ಹೋಗುತ್ತಿದ್ದಾರೆ.ಸರ್ಕಾರ ಕಣ್ಮುಚ್ಚಿ ಕುಳಿತಿದೆಯೇ ಎಂದು ಪ್ರಶ್ನಿಸಿದರು.
ಬರಗಾಲದಿಂದಲೇ ಅಂದಾಜು 17 ಸಾವಿರ ಕೋಟಿ ನಷ್ಟವಾಗಿದೆ.ರಾಜ್ಯ ಸರ್ಕಾರ ಕೇವಲ 206 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಈವರೆಗೂ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಟ್ಯಾಂಕರ್ ವ್ಯವಸ್ಥೆ ಕಲ್ಪಿಸಿಲ್ಲ. ಜಾನುವಾರುಗಳಿಗೆ ಮೇವು ಪೂರೈಕೆ ಮಾಡುವ ಮೇವು ಬ್ಯಾಂಕ್ ಕೂಡ ತೆರೆದಿಲ್ಲ. ಈ ಸರ್ಕಾರ ಜನರ ಪಾಲಿಗೆ ಇದ್ದು ಇಲ್ಲದಂತಾಗಿದೆ ಎಂದು ಟೀಕಿಸಿದರು.
ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಿಂದ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಘೋಷಣೆ ಮಾಡಿದ್ದರು.ಸುಮಾರು 46 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ.ರೈತರು ಬ್ಯಾಂಕ್ ನೋಟಿಸ್ಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಹಳೆ ಸಾಲ ಚುಕ್ತ ಮಾಡುವವರೆಗೂ ಹೊಸ ಸಾಲ ಕೊಡುವುದಿಲ್ಲ ಎಂದು ಹೇಳುತ್ತಿರುವುದರಿಂದ ರೈತರು ದಿಕ್ಕು ಕಾಣದಂತಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರುಗಳು, ಅಧಿಕಾರಿಗಳು, ಬರಪೀಡಿತ ತಾಲ್ಲೂಕುಗಳಿಗೆ ಎಷ್ಟು ಬಾರಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.ಕೇವಲ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದರೆ ಸಮಸ್ಯೆ ಪರಿಹಾರವಾದೀತೆ.ಪ್ರತಿಯೊಬ್ಬರನ್ನು ಹಳ್ಳಿಗಳಿಗೆ ಹೋಗುವಂತೆ ಸೂಚನೆ ಕೊಡಬೇಕು.ನಾವು ರೈತರ ಪರವಾಗಿ ಮಾತನಾಡಿದರೆ ಇಲ್ಲಿಯೂ ರಾಜಕೀಯ ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಮಾಡದಿದ್ದನ್ನು ಪ್ರತಿಪಕ್ಷ ಮಾಡಿದರೆ ಅದು ಹೇಗೆ ರಾಜಕೀಯವಾಗುತ್ತದೆ ಎಂದು ಪೂಜಾರಿ ಪ್ರಶ್ನಿಸಿದರು.
ಕೊಡಗಿನಲ್ಲಿ ಭಾರೀ ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಇನ್ಫೋಸಿಸ್ನ ಸುಧಾ ನಾರಾಯಣಮೂರ್ತಿ 25 ಕೋಟಿ ಹಣ ನೀಡುವುದಾಗಿ ಘೋಷಿಸಿದರು.ಇದೇ ರೀತಿ ಪಾಲಿಮರ ಮಠದ ಸ್ವಾಮೀಜಿಗಳು 87 ಮನೆಗಳನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದರು.ಸರ್ಕಾರ ದಾನಿಗಳನ್ನು ಸಂಘ-ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಪುನರ್ವಸತಿ ಕಲ್ಪಿಸಬಹುದಿತ್ತು.ಸರ್ಕಾರದ ಉಡಾಫೆ ನೀತಿಯಿಂದಾಗಿ ಅವರು ಕೂಡ ವಾಪಸ್ ಹೋಗುತ್ತಿದ್ದಾರೆ.
ಕೇವಲ ಪ್ರಚಾರಕ್ಕೆ ಮಾತ್ರ ಸರ್ಕಾರ ಸೀಮಿತವಾಗಿದೆ.ಸರ್ಕಾರದ ಸಾಧನೆಯೇ ಶೂನ್ಯ ಎಂದು ಟೀಕೆ ಮಾಡಿದರು.