ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಸ್ಪೀಕರ್ ಅವರಿಂದ ಪಾಠ

ಬೆಳಗಾವಿ(ಸುವರ್ಣಸೌಧ), ಡಿ.11-ವಿಧಾನಸಭೆ ಕಲಾಪದಲ್ಲಿ ಹೇಗೆ ಭಾಗವಹಿಸಬೇಕು ಎಂದು ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಸ್ಪೀಕರ್ ರಮೇಶ್‍ಕುಮಾರ್ ಅವರು ಪಾಠ ಮಾಡಿದ ಪ್ರಸಂಗ ನಡೆಯಿತು.

ಬೆಳಗಾವಿಯ ಅಧಿವೇಶನದ ಎರಡನೇ ದಿನವಾದ ಇಂದು ಆರಂಭದಲ್ಲೇ ಸ್ಪೀಕರ್ ಅವರು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಂಡರು.
ಎರಡು-ಮೂರು ಪ್ರಶ್ನೆಗಳ ನಂತರ ಎಚ್.ಡಿ.ಕೋಟೆ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿರುವ ಸಿ.ಅನಿಲ್‍ಕುಮಾರ್ ಅವರ ಸರದಿ ಬಂತು.
ಅನಿಲ್‍ಕುಮಾರ್ ಅವರು ನಿಯಮಬದ್ಧವಾಗಿ ಪ್ರಶ್ನೆ ಕೇಳುವ ಅರಿವಿಲ್ಲದೆ ನೇರವಾಗಿ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಸರಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಟ್ಟಡದ ಕೊರತೆ ಇರುವ ಬಗ್ಗೆ ಗಮನ ಸೆಳೆಯಲು ಮುಂದಾದರು.

ಆಗ ರಮೇಶ್‍ಕುಮಾರ್ ಅವರು ಮೊದಲು ಸಚಿವರಿಗೆ ಪ್ರಶ್ನೆ ಸಂಖ್ಯೆ ತಿಳಿಸಿ, ಪ್ರಶ್ನೆ ಕೇಳಿ ಆನಂತರ ವಿವರಣೆ ನೀಡಿ ಎಂದರು.
ಇದು ಅರ್ಥವಾಗದೆ ಅನಿಲ್‍ಕುಮಾರ್, ಮತ್ತೆ ಸಮಸ್ಯೆಯನ್ನು ವಿವರಿಸಲು ಮುಂದಾದರು.ಆಗ ರಮೇಶ್‍ಕುಮಾರ್ ಅವರು ಸಾವಧಾನವಾಗಿ ಅನಿಲ್‍ಕುಮಾರ್ ಅವರಿಗೆ ಪ್ರಶ್ನೆ ಕೇಳುವ ರೀತಿ ಹೇಳಿಕೊಟ್ಟರು.

ಅನಿಲ್‍ಕುಮಾರ್ ಅದರಂತೆ ನಡೆದುಕೊಂಡಾಗ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳುವಂತೆ ವೆರಿಗುಡ್ ಎಂದು ಶಹಭಾಷ್ ಗಿರಿ ನೀಡಿದರು.

ಅನಿಲ್‍ಕುಮಾರ್ ಅವರು ಸರಗೂರು ಕಾಲೇಜಿನ ಕಟ್ಟಡ ಕೊರತೆ ಬಗ್ಗೆ ಬೆಳಕು ಚೆಲ್ಲಿದರು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಅಲ್ಲಿ ಜಾಗದ ಲಭ್ಯತೆ ಇಲ್ಲ. ಜಾಗ ಕೊಟ್ಟರೆ ಕಟ್ಟಡ ಕಟ್ಟಲು ಸಿದ್ಧ.ಅದಕ್ಕೆ 3.80 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.
ಒಂದು ವರ್ಷದ ಹಿಂದೆಯೇ ಜಾಗ ಕೊಡಲಾಗಿದೆ ಎಂದು ಅನಿಲ್‍ಕುಮಾರ್ ಹೇಳಿದಾಗ, ಜಾಗವನ್ನು ಇಲಾಖೆಗೆ ಹಸ್ತಾಂತರ ಮಾಡಿ, ಸಚಿವರ ಜೊತೆ ಚರ್ಚೆ ಮಾಡುವಂತೆ ರಮೇಶ್‍ಕುಮಾರ್ ಮಾರ್ಗದರ್ಶನ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ