ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆ ಪ್ರಕರಣಗಳ ನಡುವೆ ಸಂಬಂಧವಿದೆ, ಸುಪ್ರೀಂಕೋರ್ಟ್‍ಗೆ ಕರ್ನಾಟಕ ಪೊಲೀಸರ ಹೇಳಿಕೆ

ನವದೆಹಲಿ, ಡಿ.11-ಹಿರಿಯ ಪರ್ತಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣಗಳ ನಡುವೆ ಸಂಬಂಧವಿದೆ ಎಂದು ಕರ್ನಾಟಕ ಪೊಲೀಸ್ ಇಂದು ಸುಪ್ರೀಂಕೋರ್ಟ್‍ಗೆ ಹೇಳಿಕೆ ನೀಡಿದೆ.

ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಒಳಗಾಗಿ ಆರೋಪಪಟ್ಟಿಯನ್ನು ಸಲ್ಲಿಸುವುದಾಗಿಯೂ ಕರ್ನಾಟಕ ಪೊಲೀಸ್ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ನವೀನ್ ಸಿನ್ಹಾ ಅವರನ್ನು ಒಳಗೊಂಡ ಪೀಠವು 2015ರಲ್ಲಿ ಹತ್ಯೆಯಾದ ಖ್ಯಾತ ವಿದ್ವಾಂಸ ಮತ್ತು ವಿಚಾರವಾದಿ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ ಬಗ್ಗೆ ಇಂದು ನಡೆಸಿದ ವಿಚಾರಣೆ ವೇಳೆ ರಾಜ್ಯದ ಪೊಲೀಸರು ಹೇಳಿಕೆಗಳನ್ನು ದಾಖಲಿಸಿದರು.

ನವೆಂಬರ್ 26ರಂದು ರಾಜ್ಯವನ್ನು ತರಾಟೆಗೆ ತೆಗದುಕೊಂಡಿದ್ದ ಸುಪ್ರೀಂಕೋರ್ಟ್, ಈ ಹತ್ಯೆ ಪ್ರಕರಣದ ತನಿಖೆಯಲ್ಲಿ ಸರ್ಕಾರ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂದು ಛೇಡಿಸಿ, ಈ ಪ್ರಕರಣವನ್ನು ಬಾಂಬೆ ಹೈಕೋರ್ಟ್‍ಗೆ ವರ್ಗಾವಣೆ ಮಾಡುವ ಬಗ್ಗೆ ಮುನ್ಸೂಚನೆ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ