
ಬೆಳಗಾವಿ, ಡಿ.11- ರಾಜ್ಯದಲ್ಲಿ 52 ಸಿಡಿಪಿಒಗಳನ್ನು ನೇಮಕ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಚಿವೆ ಡಾ.ಜಯಮಾಲ ಅವರು ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಪೂರ್ವ ತಾಲ್ಲೂಕು ವ್ಯಾಪ್ತಿಯಲ್ಲಿ 184 ಅಂಗನವಾಡಿ ಕೇಂದ್ರಗಳನ್ನು ಬೆಂಗಳೂರು ನಗರ ಜಿಲ್ಲೆಯ ಸಮಗ್ರ ಶಿಶು ಅಭಿವೃದ್ದಿ ಯೋಜನೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಇಲಾಖಾ ಕಾರ್ಯಕ್ರಮಗಳು ಕುಂಠಿತವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ಹುದ್ದೆಯನ್ನು ಪ್ರಭಾರದ ಮೇಲೆ ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ವಹಿಸಲಾಗಿದೆ ಎಂದರು.
ರಾಯಚೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ 59,296 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿವೆ ಎಂದು ಶಾಸಕ ಶಿವನಗೌಡ ನಾಯಕ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಅಪೌಷ್ಠಿಕತೆ ಹೋಗಲಾಡಿಸಲು ಸಮಗ್ರ ಶಿಶು ಅಭಿವೃದ್ದಿ ಯೋಜನೆಯಡಿ ಸಾಮಾನ್ಯ ಮಕ್ಕಳಿಗೆ ಪ್ರತಿ ದಿನ 8 ರೂ.ನಂತೆ, ಗರ್ಭಿಣಿ, ಬಾಣಂತಿಯರಿಗೆ ಘಟಕ ವೆಚ್ಚವಾಗಿ 9.5 ರೂ.ನಂತೆ ಹಾಗೂ ತೀವ್ರ ಅಪೌಷ್ಠಿಕತೆಯುಳ್ಳ ಮಕ್ಕಳಿಗೆ 12 ರೂ. ವೆಚ್ಚ ಬರಿಸಲಾಗುತ್ತಿದೆ.
3ರಿಂದ 6 ವರ್ಷ ಮಕ್ಕಳಿಗೆ 2 ದಿನ ಮೊಟ್ಟೆ, ಐದು ದಿನ ಹಾಲು ನೀಡಲಾಗುತ್ತಿದೆ. 6 ತಿಂಗಳಿಂದ 3.5 ವರ್ಷದ ಅಪೌಷ್ಠಿಕತೆ ಯುಳ್ಳ ಮಕ್ಕಳಿಗೆ ಮೂರು ದಿನ ಮೊಟ್ಟೆ, 6 ದಿನ ಹಾಲು, ಚಿಕಿತ್ಸಾ ಆಹಾರಕ್ಕಾಗಿ ಪ್ರತಿ ಮಗುವಿಗೆ ವಾರ್ಷಿಕ 2 ಸಾವಿರ ವೆಚ್ಚ ಮಾಡಲಾಗುತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 328 ಅಪೌಷ್ಠಿಕತೆ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಕಳೆದ ಮೂರು ವರ್ಷಗಳಿಂದ ಅಪೌಷ್ಠಿಕತೆ ನಿವಾರಣೆಗಾಗಿ 95.49 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.
ಪ್ರಸಕ್ತ ಸಾಲಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ಮೊದಲ ಮೂರು ಕಂತುಗಳು ಹಾಗೂ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ, ಸಹಾಯಕರಿಗೆ ಒಂದು ಸಾವಿರ ರೂ. ಹೆಚ್ಚಿಸಲಾಗಿತ್ತು. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 8 ಸಾವಿರ ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 4,750 ರೂ.ನೀಡಲಾಗುತ್ತಿದೆ.ರಾಜ್ಯದಲ್ಲಿ 61 025 ಅಂಗನವಾಡಿ ಕಾರ್ಯಕರ್ತೆಯರು, 3331 ಮಿನಿ ಅಂಗನವಾಡಿ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.