ನವದೆಹಲಿ, ಡಿ.11-ಬುಡಕಟ್ಟು ರಾಜ್ಯ ಛತ್ತೀಸ್‍ಗಢದ 90 ಸದಸ್ಯ ಬಲ ಹೊಂದಿದ್ದ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ 59 ಸ್ಥಾನ ಪಡೆಯುವ ಮೂಲಕ ಅಧಿಕಾರದ ಗದ್ದುಗೆಗೆ ಏರಲಿದೆ.
ಕಳೆದ 15 ವರ್ಷಗಳಿಂದ ಮುಖ್ಯಮಂತ್ರಿ ರಮಣ್‍ಸಿಂಗ್ ನೇತೃತ್ವದಲ್ಲಿ ಬಿಜೆಪಿ ಕೇವಲ 24 ಸ್ಥಾನ ಪಡೆಯುವುದರ ಜೊತೆಗೆ ಅಧಿಕಾರ ಕಳೆದುಕೊಂಡಿದೆ.
ಪ್ರತಿಬಾರಿಯೂ ಛತ್ತೀಸ್‍ಗಢದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆಯೇ ತೀವ್ರ ಪೈಪೋಟಿ ನಡೆದು ಕುತೂಹಲಕಾರಿ ಫಲಿತಾಂಶಕ್ಕೆ ರಾಜ್ಯ ಸಾಕ್ಷಿಯಾಗುತ್ತಿತ್ತು.
ಕಳೆದ ಬಾರಿ 90 ವಿಧಾನಸಭಾ ಸ್ಥಾನಗಳ ಛತ್ತೀಸ್‍ಗಢದಲ್ಲಿ ಬಿಜೆಪಿ 49 ಸ್ಥಾನ ಪಡೆದು ಅಧಿಕಾರಕ್ಕೇರಿತ್ತು. ಕಾಂಗ್ರೆಸ್ 39 ಸ್ಥಾನ ಪಡೆದು ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು.
ಈ ಬಾರಿ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ನೇತೃತ್ವದ ಜನತಾ ಕಾಂಗ್ರೆಸ ಛತ್ತೀಸ್‍ಗಢ(ಜೆ) ಮತ್ತು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಬಹುಜನ ಸಮಾಜ ಪಕ್ಷ ಮೈತ್ರಿ ಮಾಡಿಕೊಂಡಿದ್ದವು. ಈ ಮೈತ್ರಿ ಕೂಟ ಗೆಲುವು ಸಾಧಿಸುವುದು ಕಷ್ಟ ಎಂಬ ಸಮೀಕ್ಷೆಗಳ ಲೆಕ್ಕಾಚಾರ ತಲೆಕೆಳಗಾಗಿದೆ.