ಬುಲಂದ್ ಶಹರ್: ಉತ್ತರಪ್ರದೇಶದ ಬುಲಂದ್ ಶೆಹರ್ ನ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಮತ್ತು ಯುವಕ ಸುಮಿತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧ ಜಿತೇಂದ್ರ ಮಲೀಕ್ (ಜಿತು ಫೌಜಿ) ಎಂಬವರನ್ನು ಉತ್ತರಪ್ರದೇಶದ ಎಸ್ಟಿಎಫ್ ಬಂಧಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎಸ್ಟಿಎಫ್ ಹಿರಿಯ ಪೊಲೀಸ್ ಅಧಿಕಾರಿ ಅಭಿಷೇಕ್ ಸಿಂಗ್ ಅವರು, ಪ್ರಕರಣದ ಶಂಕಿತ ಆರೋಪಿ, ‘ಜಿತು ಫೌಜಿಯನ್ನು ನಾವು ಬಂಧಿಸಿದ್ದೇವೆ. ಶನಿವಾರ ಮಧ್ಯರಾತ್ರಿ ಸೇನೆ ಜಿತು ಫೌಜಿಯನ್ನು ನಮ್ಮ ವಶಕ್ಕೆ ನೀಡಿತು. ಪ್ರಸ್ತುತ ಪ್ರಾಥಮಿಕ ತನಿಖೆ ಪೂರ್ಣಗೊಳಿಸಿದ್ದೇವೆ. ಅವರನ್ನು ಬುಲಂದ್ ಶಹರ್ ಗೆ ಕಳುಹಿಸಲಾಗುವುದು. ನಂತರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಭಾರತೀಯ ಸೇನೆಯ 22 ರಾಷ್ಟ್ರೀಯ ರೈಫಲ್ಸ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿತು ಫೌಜಿ ಮೂಲತಃ ಬುಲಂದ್ ಶೆಹರ್ ನವರಾಗಿದ್ದಾರೆ. 15 ದಿನಗಳ ರಜೆ ಮೇರೆಗೆ ಊರಿಗೆ ಬಂದಿದ್ದ ಅವರು, ಘರ್ಷಣೆ ಸಂಭವಿಸಿದ ದಿನ ಅಲ್ಲಿಯೇ ಇದ್ದರು. ಅಲ್ಲದೆ, ಘರ್ಷಣೆಯ ಹಲವು ವಿಡಿಯೋಗಳಲ್ಲಿ ಅವರ ಚಲನವಲನ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯಲ್ಲಿ ಸುಬೋಧ್ ಕುಮಾರ್ ಸಿಂಗ್ ಮತ್ತು ಯುವಕ ಸಮಿತ್ ಮೃತಪಟ್ಟ ನಂತರ ಯೋಧ ಜಿತು ಫೌಜಿ ನೇರವಾಗಿ ಕಾಶ್ಮೀರದ ಸೋಪೋರ್ಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಜು ಫೌಜಿಯನ್ನು ಶುಕ್ರವಾರ ರಾತ್ರಿ ಜಮ್ಮು ಕಾಶ್ಮೀರದ ಸೋಪೊರೆ ಪಟ್ಟಣದಲ್ಲಿ ಸೇನೆ ವಶಕ್ಕೆ ಪಡೆದಿತ್ತು. ನಂತರ ಅವರನ್ನು ಎಸ್ಟಿಎಫ್ಗೆ ಒಪ್ಪಿಸಲಾಗಿತ್ತು. ಬುಲಂದ್ ಶೆಹರ್ ನಲ್ಲಿ ಇತ್ತೀಚೆಗೆ ಗೋ ಹತ್ಯೆ ಖಂಡಿಸಿ ನಡೆದಿದ್ದ ಪ್ರತಿಭಟನೆ ಘರ್ಷಣೆಗೆ ತಿರುಗಿ ಅದರಲ್ಲಿ ಇನ್ಸ್ಪೆಕ್ಟರ್ ಸುಬೋಧ್ಕುಮಾರ್ ಸಿಂಗ್ ಮತ್ತು ವಿದ್ಯಾರ್ಥಿ ಸುಮಿತ್ ಮೃತಪಟ್ಟಿದ್ದರು.
Bulandshahr Violence,suspected Armyman,Arrest