ಬೆಳಗಾವಿಯನ್ನು ಕರ್ನಾಟಕದ 2ನೇ ರಾಜಧಾನಿ ಎಂದು ಘೋಷಿಸಲು ಚಿಂತನೆ

ಬೆಂಗಳೂರು, ಡಿ.8- ಗಡಿ ವಿವಾದವನ್ನು ಮುಂದಿಟ್ಟುಕೊಂಡು ಕರ್ನಾಟಕದ ವಿರುದ್ಧ ಸದಾ ಕತ್ತಿ ಮಸೆಯುವ ಎಂಇಎಸ್ ಮತ್ತು ಮಹಾರಾಷ್ಟ್ರದ ಆಟಾಟೋಪಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಕುಂದಾ ನಗರಿ ಬೆಳಗಾವಿಯನ್ನು ಕರ್ನಾಟಕದ ಎರಡನೆ ರಾಜಧಾನಿ ಎಂದು ಘೋಷಿಸಲು ಚಿಂತನೆ ನಡೆಸಿದೆ.

ಸೋಮವಾರದಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಈ ಮೂಲಕ ಕಳೆದ ಹಲವು ದಶಕಗಳ ವಿವಾದ ಹಾಗೂ ಬಹು ಕೋಟಿ ಕನ್ನಡಿಗರ ಬೇಡಿಕೆಯನ್ನು ಈಡೇರಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ನೆರೆಯ ಮಹಾರಾಷ್ಟ್ರದಲ್ಲಿ ಮುಂಬೈ ರಾಜಧಾನಿಯಾದರೂ ನಾಗಪುರವನ್ನು ಎರಡನೆ ರಾಜಧಾನಿ ಎಂದು ಘೋಷಣೆ ಮಾಡಲಾಗಿದೆ. ಇದೇ ರೀತಿ ಕರ್ನಾಟಕವು ಬೆಳಗಾವಿಯನ್ನು ಎರಡನೆ ರಾಜಧಾನಿ ಎಂದು ಘೋಷಿಸುವ ಮೂಲಕ ಗಡಿ ವಿವಾದವನ್ನು ಕೆಣಕುತ್ತಿರುವ ಮಹಾರಾಷ್ಟ್ರಕ್ಕೆ ಹಾಗೂ ಎಂಇಎಸ್ ಪುಂಡಾಟಕ್ಕೆ ಕಡಿವಾಣ ಹಾಕುವುದು ಇದರ ಮುಖ್ಯ ಉದ್ದೇಶ.

ಸಂವಿಧಾನದಲ್ಲಿ ಯಾವುದೇ ರಾಜ್ಯದ ಎರಡನೆ ರಾಜಧಾನಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಒಂದು ನಗರವನ್ನು ರಾಜಧಾನಿ ಎಂದು ಘೋಷಣೆ ಮಾಡಿದ ಮೇಲೆ ಎರಡನೆ ನಗರವನ್ನು ಪರಿಗಣಿಸಲು ಅವಕಾಶವಿಲ್ಲ.

ಆದರೆ ರಾಜ್ಯ ಸರ್ಕಾರ ತನಗಿರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು ಎರಡನೆ ರಾಜಧಾನಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬಹುದು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ನಂತರ ಪ್ರತ್ಯೇಕ ಕರ್ನಾಟಕ ವಿವಾದ ಕೇಳಿ ಬಂದಿತ್ತು. ಬಜೆಟ್‍ನಲ್ಲಿ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಲಾಗಿದೆ ಎಂದು ಆ ಭಾಗದ ಜನಪ್ರತಿನಿಧಿಗಳು ಆರೋಪಿಸಿದ್ದರು.

ಜತೆಗೆ ಕಳೆದ ಎರಡು ದಶಕಗಳಿಂದಲೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಕೂಗು ಕೇಳಿ ಬರುತ್ತಿದೆ. ಶಿಕ್ಷಣ, ಕೈಗಾರಿಕೆ, ನೀರಾವರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ದಕ್ಷಿಣ ಕರ್ನಾಟಕದಷ್ಟು ಈ ಭಾಗ ಅಭಿವೃದ್ಧಿಯಾಗಿಲ್ಲ ಎಂಬ ಆರೋಪ ಇದೆ.

ಅದರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕವನ್ನು ಬಜೆಟ್‍ನಲ್ಲಿ ಕಡೆಗಣಿಸಲಾಗಿದೆ ಎಂಬ ಕೂಗು ಕೇಳಿ ಬಂದಿತ್ತು.

ಮಾಜಿ ಸಚಿವರಾದ ಉಮೇಶ್ ಕತ್ತಿ , ಶ್ರೀರಾಮುಲು ಸೇರಿದಂತೆ ಅನೇಕರು ಪ್ರತ್ಯೇಕ ಕರ್ನಾಟಕದ ಕೂಗಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದರು. ಈ ವೇಳೆ ಸಾಹಿತಿಗಳು , ಚಿಂತಕರು, ಕನ್ನಡ ಪರ ಸಂಘಟನೆಗಳು ಕುಮಾರ ಸ್ವಾಮಿ ಅವರನ್ನು ಭೇಟಿ ಮಾಡಿ ಬೆಳಗಾವಿಯನ್ನು ಎರಡನೆ ರಾಜಧಾನಿ ಮಾಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದರು. ಇದಕ್ಕೆ ಅವರು ಸಕಾರಾತ್ಮಕವಾಗಿಯೂ ಸ್ಪಂದಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ