ಬೆಂಗಳೂರು, ಡಿ.8- ಸರ್ಕಾರದಲ್ಲಿ ಯಾವುದೇ ಹಣ ದುರುಪಯೋಗವಾದರೂ ಅದರ ಅಧ್ಯಯನಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಇದೆ. ಬಿಜೆಪಿಯ ಆರ್.ಅಶೋಕ್ ಆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬದಲಾಗಿ ಆ ಸಮಿತಿ ಇದ್ದರೂ ಮತ್ತೊಂದು ಸದನ ಸಮಿತಿಗೆ ಬಿಜೆಪಿ ನಾಯಕರು ಆಗ್ರಹ ಮಾಡುವ ಮೂಲಕ ಅಶೋಕ್ ಅವರ ಸಾಮಥ್ರ್ಯವನ್ನು ಅನುಮಾನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ವಿ.ಆರ್.ಸುದರ್ಶನ್, ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಹಾಗೂ ಇತರೆ ನಾಯಕರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 35ಸಾವಿರ ಕೋಟಿ ಹಣ ದುರುಪಯೋಗವಾಗಿದೆ ಎಂದು ಬಿಜೆಪಿ ಶಾಸಕಾರದ ಸಿ.ಟಿ.ರವಿ, ರವಿಕುಮಾರ್ ಹಾಗೂ ಮತ್ತಿತರರು ಆರೋಪ ಮಾಡಿದ್ದಾರೆ. ಅವರು ಆರೋಪ ಮಾಡುವ ಮೊದಲು ಮತ್ತಷ್ಟು ಅಧ್ಯಯನ ಮಾಡಬೇಕಿತ್ತು. ಅವರ ಮಾತುಗಳು ಬಾಲಿಶವಾಗಿ ಕೂಡಿವೆ. ಕನಿಷ್ಠ ಆಡಳಿತದ ಅನುಭವ ಇರುವ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರ ಜತೆಯಲ್ಲಾದರೂ ಮಾತುಕತೆ ನಡೆಸಬೇಕಿತ್ತು. ಇದ್ಯಾವುದನ್ನೂ ಮಾಡದೆ ಅನಾನುಭವಿಗಳಂತೆ ಬಿಜೆಪಿ ಶಾಸಕರು ಸಿಎಜಿ ವರದಿ ಆಧರಿಸಿ ಪುಸ್ತಕ ಬಿಡುಗಡೆ ಮಾಡಿ ರಾಜಕೀಯ ಲಾಭ ಮಾಡಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತೀ ವರ್ಷ ಆಡಳಿತದ ರೂಢಿಯಲ್ಲಿ ಕೆಲವು ಹೊಂದಾಣಿಕೆಗಳು ನಡೆಯುತ್ತವೆ. ಖರ್ಚು, ವೆಚ್ಚಕ್ಕೆ ಅನುಪಾಲನಾ ವರದಿಯನ್ನು ನೀಡುವುದು ವಿಳಂಬವಾಗುತ್ತದೆ. ಖರ್ಚು ಮಾಡಿದ ವೆಚ್ಚಗಳ ಬಗ್ಗೆ ಅಧಿಕಾರಿಗಳು ಆಯಾ ಹಣಕಾಸಿನ ವರ್ಷದಲ್ಲೇ ವರದಿ ಸಲ್ಲಿಸದೇ ಇರುವುದರಿಂದ ಈ ರೀತಿಯ ವ್ಯತ್ಯಾಸಗಳಾಗುತ್ತವೆ. ಅದು ಯಾವುದೇ ಹಗರಣ, ಭ್ರಷ್ಟಾಚಾರವೂ ಅಲ್ಲ. ಆರೋಪ ಮಾಡಿರುವ ಬಿಜೆಪಿ ಶಾಸಕರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಬಾಲಿಶ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತಿರುಗೇಟು ನೀಡಿದರು.
ಈ ರೀತಿಯ ಆರ್ಥಿಕ ವ್ಯತ್ಯಯಗಳ ಬಗ್ಗೆ ಅಧ್ಯಯನ ಮಾಡಲು ವಿಧಾನಸಭೆ ಮತ್ತು ವಿಧಾನಮಂಡಲ ಎರಡರಿಂದಲೂ ತಲಾ 10 ಮಂದಿ ಸದಸ್ಯರು ಸೇರಿ ಒಟ್ಟು 20 ಮಂದಿ ಶಾಸಕರಿರುವ ಲೆಕ್ಕ ಪತ್ರ ಸಮಿತಿಯನ್ನು ರಚಿಸಲಾಗುತ್ತದೆ. ಇದರಲ್ಲಿ ಎಲ್ಲಾ ಪಕ್ಷಗಳ ಶಾಸಕರು ಸದಸ್ಯರಾಗಿರುತ್ತಾರೆ. ಪ್ರಮುಖವಾಗಿ ವಿರೋಧ ಪಕ್ಷದ ನಾಯಕರೇ ಅಧ್ಯಕ್ಷರಾಗಿರುತ್ತಾರೆ. ಈ ಬಾರಿಯ ಲೆಕ್ಕಪತ್ರ ಸಮಿತಿಗೆ ಯಡಿಯೂರಪ್ಪ ಅವರು ಕಾರ್ಯದೊತ್ತಡದಿಂದ ಅಧ್ಯಕ್ಷರಾಗಿಲ್ಲ. ಬದಲಾಗಿ ಆರ್.ಅಶೋಕ್ ಅಧ್ಯಕ್ಷರಾಗಿದ್ದಾರೆ. ಅವರು ಸಮಿತಿಯ ಸಭೆಗಳಲ್ಲಿ ಆರ್ಥಿಕ ವ್ಯತ್ಯಾಸಗಳ ಬಗ್ಗೆ ಅಧ್ಯಯನ ಮಾಡಬಹುದು, ಪ್ರಶ್ನಿಸಬಹುದು, ತಪ್ಪುಗಳಿದ್ದರೆ ಸರ್ಕಾರಕ್ಕೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಶಿಫಾರಸು ಮಾಡಬಹುದು. ಇಷ್ಟೆಲ್ಲಾ ಅವಕಾಶಗಳಿದ್ದರೂ ಬಿಜೆಪಿಯ ಹಿರಿಯ ಶಾಸಕ ಸಿ.ಟಿ.ರವಿ ಅವರು ಸದನ ಸಮಿತಿ ರಚಿಸಬೇಕು ಎಂದು ಹೇಳಿದ್ದಾರೆ. ಇವರ ಒತ್ತಾಯ ಹಾಸ್ಯಾಸ್ಪದ. ಅವರಿಗೆ ಅಶೋಕ್ ಮೇಲೆ ನಂಬಿಕೆ ಇಲ್ಲವೆ ಎಂಬ ಅನುಮಾನ ಮೂಡುತ್ತಿದೆ ಎಂದು ಸುದರ್ಶನ್ ಹೇಳಿದರು.
ಬಿಜೆಪಿ ಶಾಸಕರು 35 ಸಾವಿರ ಕೋಟಿ ಆರೋಪದ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ಮಾಡಬಹುದಿತ್ತು. ಅದನ್ನು ಬಿಟ್ಟು ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.