ಬೆಂಗಳೂರು, ಡಿ.7- ಕೃಷಿ ಉತ್ಪನ್ನಗಳ ಆನ್ಲೈನ್ ಮಾರಾಟಕ್ಕೆ ಪರವಾನಗಿ ನೀಡುತ್ತಿರುವ ಕ್ರಮ ಖಂಡಿಸಿ ಎಪಿಎಂಸಿ ವರ್ತಕರ ಒಕ್ಕೂಟವು ಇಂದಿನಿಂದ ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಯಶವಂತಪುರ ಎಪಿಎಂಸಿ ವರ್ತಕರ ಒಕ್ಕೂಟ, ಲಾರಿ ಮಾಲೀಕರ ಸಂಘ, ಗ್ರೈನ್ ಮರ್ಚೆಂಟ್ ಅಸೋಸಿಯೇಷನ್, ಪಲ್ಸಸಸ್ ಮರ್ಚೆಂಟ್ಸ್ ಅಸೋಸಿಯೇಷನ್, ಕೂಲಿ ಕಾರ್ಮಿಕರ ಸಂಘದ ಮುಖಂಡರು ಇಂದು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಆನ್ಲೈನ್ ಮಾರಾಟ ಕ್ರಮವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಎಪಿಎಂಸಿಗೆ ಪ್ರತಿ ದಿನ ಟನ್ಗಟ್ಟಲೆ ತರಕಾರಿ, ದವಸ, ಧಾನ್ಯಗಳು ಬರುತ್ತವೆ. ನೂರು ಟನ್ನಿಂದ ಸಾವಿರ ಟನ್ಗಳ ವರೆಗೆ ವ್ಯಾಪಾರ ವಹಿವಾಟು ನಡೆಯುತ್ತದೆ.ಈ ವ್ಯಾಪಾರ ಅವಲಂಬಿಸಿ ಸಾವಿರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ.ಸರ್ಕಾರ ಆನ್ಲೈನ್ ಸೇವೆಯನ್ನು ಜಾರಿಗೆ ತಂದು ಜನರ ಬದುಕನ್ನು ಬರ್ಬಾದ್ ಮಾಡಲು ಹೊರಟಿದೆ. ಇದನ್ನು ಖಂಡಿಸಿ ನಾವು ಅನಿರ್ದಿಷಾವಧಿ ಬಂದ್ಗೆ ಕರೆ ನೀಡಿದ್ದೇವೆ ಎಂದು ಗ್ರೈನ್ ಮರ್ಚೆಂಟ್ ಅಸೋಸಿಯೇಷನ್ ಪ್ರಸನ್ನಕುಮಾರ್, ರಮೇಶ್ಚಂದ್ರ ಲಹೋಟಿ, ಬಿ.ಎಲ್.ಶಂಕರಪ್ಪ ಮುಂತಾದವರು ತಿಳಿಸಿದರು.
ಈಗಾಗಲೇ ಮಾರಾಟ ಸೇರಿದಂತೆ ಹಲವು ರಾಜ್ಯಗಳಲ್ಲಿ ಆನ್ಲೈನ್ ಸೇವೆಗಳನ್ನು ನಿಷೇಧಿಸಲಾಗಿದೆ.ರಾಜ್ಯದಲ್ಲಿ ಆನ್ಲೈನ್ ಸೇವೆಯಿಂದ ವರ್ತಕರ ಬದುಕಿನ ಮೇಲೆ ಬರೆ ಎಳೆಯಲಾಗಿದೆ ಎಂದು ಆರೋಪಿಸಿದರು.
ಆನ್ಲೈನ್ ಸೇವೆಯಿಂದ ಚಿಲ್ಲರೆ ವ್ಯಾಪಾರಿಗಳ ಬದುಕಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.ಲಾರಿ ಮಾಲೀಕರು, ಕೂಲಿ ಕಾರ್ಮಿಕರಿಗೂ ಅನಾನುಕೂಲವಾಗುತ್ತದೆ.ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಜನಪ್ರತಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ನಾವು ಬಂದ್ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಸರ್ಕಾರ ಎಚ್ಚೆತ್ತುಕೊಂಡು ನಮ್ಮ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಅವರು ತಿಳಿಸಿದರು.
ಎಪಿಎಂಸಿ ಮಾರುಕಟ್ಟೆಗೆ ಆಗಮಿಸಿದ ಶಾಸಕ ಗೋಪಾಲಯ್ಯ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿ, ನಿಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುತ್ತೇನೆ. ಆನ್ಲೈನ್ ಮಾರಾಟ ಕ್ರಮ ನಿಷೇಧಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.