ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಸರ್ಗ ಭವನದಲ್ಲಿ ಇಂದು ಬಿ. ಬಸವಲಿಂಗಪ್ಪ ಜಲಪರೀಕ್ಷಾ ಪ್ರಯೋಗಾಲಯವನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬಸವಲಿಂಗಪ್ಪ ಅವರು ಪರಿಸರ ಇಲಾಖೆಯ ಮೊದಲ ಸಚಿವರಾಗಿದ್ದರು. ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದವರು. ಅವರ ಹೆಸರಿನಲ್ಲಿ ಪ್ರಯೋಗಾಲಯ ತೆರೆದಿರುವುದು ಪ್ರಶಂಸನೀಯ ಎಂದರು.
ರಾಜ್ಯದ ೮ ಜಾಗದಲ್ಲಿ ಪ್ರಯೋಗಾಲಯ ತೆರೆಯಲಾಗಿದ್ದು, ಶುದ್ಧ ಕುಡಿಯುವ ನೀರು ಸಂಶೋದಿಸಲು ಈ ಪ್ರಯೋಗಾಲಯ ಸಹಕಾರಿಯಾಗಿದೆ. ಬೆಂಗಳೂರಿನಲ್ಲಿ ತೆರೆದಿರುವ ಈ ಪ್ರಯೋಗಾಲಯ ಮಾದರಿ ಪ್ರಯೋಗಾಲಯ ಆಗಿದೆ.
ಇತ್ತೀಚಿನ ದಿನಗಳಲ್ಲಿ ಪರಿಸರ, ನೀರು ಕಲುಶಿತಗೊಳ್ಳುತ್ತಿದೆ. ಇದರ ಶುದ್ದೀಕರಣಕ್ಕೆ ಪ್ರಯೋಗಾಲಯಗಳ ಅಗತ್ಯತೆ ಹೆಚ್ಚಿದೆ. ಜನರಿಗೂ ಕೂಡ ಮಾಲಿನ್ಯ ಮಾಡದಂತೆ ಜಾಗೃತಿ ಮೂಡಿಸಬೇಕು ಎಂದರು.
ಇದೇ ವೇಳೆ ಯಾವ ಆಧಾರದ ಮೇಲೆ ಎನ್ಜಿಟಿ ಅವರು ಸರಕಾರಕ್ಕೆ ದಂಡ ಹಾಕಿದ್ದಾರೆ ತಿಳಿದಿಲ್ಲ.ಆದರೆ ದಂಡ ಹಾಕುವ ಬೆಳವಣಿಗೆ ಸರಿಯಲ್ಲ. ಕೆರೆ ವಿಚಾರವಾಗಿ ಎನ್ಜಿಡಿ ಹೊಂದಿರುವ ಉದ್ದೇಶ ಸರಿಯೇ ಇದ್ದರೂ, ನಿರ್ವಹಣೆ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿಲ್ಲ. ಬೆಳ್ಳಂದೂರು ಕೆರೆ ನಿರ್ವಹಣೆಗೆ ಈ ಬಾರಿ ೫೦ ಕೋಟಿ ರು. ಮೀಸಲಿಡಲಾಗಿದೆ. ಇದೀಗ ಅದರ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ. ಈ ಸಂದರ್ಭದಲ್ಲಿ ಎನ್ಜಿಟಿ ದಂಡ ಹಾಕಿರುವುದು ಸರಿಯಲ್ಲ. ಎನ್ಜಿಟಿ ನೀಡಿರುವ ಒಂದು ತಿಂಗಳ ಗಡುವು ಸರಿಯಲ್ಲ.
ಅವರ ವ್ಯಾಪ್ತಿ ಎಷ್ಟಿದೆ ಎಂಬುದು ತಿಳಿಯಬೇಕಿದೆ. ದಂಡ ವಿಧಿಸಿರುವ ಸಂಬಂಧ ಎನ್ಜಿಟಿ ಅವರ ಲಿಖಿತ ಆದೇಶದ ಪ್ರತಿ ಕೈ ಸೇರಿಲ್ಲ. ಪ್ರತಿ ಸಿಕ್ಕ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಚೈನೈಗೆ ಏರ್ ಆ್ಯಂಬುಲೆನ್ಸ್ ಮೂಲಕ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಅವರ ಆರೋಗ್ಯದ ವಿಚಾರವಾಗಿ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ತಮಿಳುನಾಡು ಗೃಹ ಇಲಾಖೆಯೊಂದಿಗೆ ಸಂಹವನ ನಡೆಸಿದ್ದು, ಅಲ್ಲಿಯೂ ಸ್ವಾಮೀಜಿ ಅವರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿ ಅವರು ಆರೋಗ್ಯವಾಗಿ ಹಿಂತಿರುಗಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.