ಬೆಂಗಳೂರು, ಡಿ.6- ರೈತರ ಉತ್ಪನ್ನ ಆನ್ಲೈನ್ ಮಾರಾಟಕ್ಕೆ ಪರವಾನಗಿ ನೀಡುತ್ತಿರುವುದನ್ನು ಖಂಡಿಸಿ ನಾಳೆ ಎಪಿಎಂಸಿ ಬಂದ್ಗೆ ಕರೆ ನೀಡಲಾಗಿದೆ.
ಇಂದು ತುರ್ತು ಸಭೆ ಸೇರಿರುವ ಲಾರಿ ಮಾಲೀಕರ ಸಂಘ, ಕೂಲಿ ಕಾರ್ಮಿಕರು, ಎಪಿಎಂಸಿ ಒಕ್ಕೂಟ, ಗ್ರೈನ್ ಮರ್ಚೆಂಟ್ ಅಸೋಸಿಯೇಷನ್ ಮತ್ತಿತರ ಸಂಘಟನೆಗಳ ಮುಖಂಡರು ಬಿ2ಬಿ ಆ್ಯಪ್ ಆನ್ಲೈನ್ ಸೇವೆಗೆ ಪರವಾನಗಿ ನೀಡುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ನಾಳೆ ಬಂದ್ಗೆ ಕರೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಶಂಕರಪ್ಪ, ಈಗಾಗಲೇ ರೈತರ ಬೆಳೆಗೆ ಸೂಕ್ತ ಬೆಲೆ ಸಿಗದೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಇತ್ತ ವರ್ತಕರಿಗೂ ಕೂಡ ಸರಿಯಾದ ಸೌಲಭ್ಯ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ.ಇದರ ನಡುವೆ ರಾಜ್ಯ ಸರ್ಕಾರ ನಮ್ಮ ಮೇಲೆ ಗದಾಪ್ರಹಾರ ನಡೆಸಲು ಮುಂದಾಗುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ನಮ್ಮ ಎಪಿಎಂಸಿಯಲ್ಲಿ ಪ್ರತಿದಿನ ಟನ್ಗಟ್ಟಲೆ ತರಕಾರಿ, ದವಸ-ಧಾನ್ಯಗಳು ಬರುತ್ತಿವೆ. ಒಂದು ಸಾವಿರ ಟನ್ನಿಂದ ನೂರು ಟನ್ಗಳವರೆಗೂ ಪ್ರತಿದಿನ ವ್ಯಾಪಾರ-ವಹಿವಾಟು ನಡೆಯುತ್ತಿದೆ.ರೈತರಿಗೂ ನ್ಯಾಯಯುತ ಬೆಲೆ ಸಿಗಲು ಪ್ರಯತ್ನಗಳು ನಡೆಯುತ್ತಿವೆ. ಹೀಗಿರುವಾಗ ರಾಜ್ಯಸರ್ಕಾರ ಆನ್ಲೈನ್ ಸೇವೆಯನ್ನು ಜಾರಿಗೆ ತಂದು ಕಾಪೆರ್Çರೇಟ್ ಕಂಪೆನಿಗಳಿಗೆ ಅನುವು ಮಾಡಿಕೊಡಲು ಮುಂದಾಗುತ್ತಿದೆ.
ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಆನ್ಲೈನ್ ಸೇವೆ ನಿಷೇಧಿಸಲಾಗಿದೆ.ಆದರೆ, ಕರ್ನಾಟಕದಲ್ಲಿ ಆ ವ್ಯವಸ್ಥೆ ಜಾರಿಗೆ ತರಲು ವ್ಯವಸ್ಥಿತ ಪಿತೂರಿಯನ್ನು ಕಾಣದ ಕೈಗಳು ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಿಟೇಲ್ ವ್ಯಾಪಾರಸ್ಥರು ಕೂಡ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ.ಇದರ ನಡುವೆ ಲಾರಿ ಮಾಲೀಕರು, ಕೂಲಿ ಕಾರ್ಮಿಕರ ಜೀವನದ ಮೇಲೆ ಬರೆ ಎಳೆಯಲು ಸರ್ಕಾರ ಯತ್ನಿಸುತ್ತಿದೆ.ಈ ಹಿಂದೆಯೇ ಇದರ ಬಗ್ಗೆ ಅಧಿಕಾರಿಗಳಿಗೆ, ರಾಜಕೀಯ ಮುಖಂಡರಿಗೆ ತಿಳಿಸಿದ್ದರೂ ನಮ್ಮ ಬೇಡಿಕೆಗಳನ್ನು ಪರಿಗಣಿಸುತ್ತಿಲ್ಲ. ಇದರಿಂದಾಗಿ ಬಂದ್ ಆಚರಿಸುತ್ತಿದ್ದೇವೆ. ಇದಕ್ಕೂ ಬಗ್ಗದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಗ್ರೈನ್ ಮರ್ಚೆಂಟ್ ಅಸೋಸಿಯೇಷನ್ನ ಪ್ರಸನ್ನಕುಮಾರ್, ರಮೇಶ್ಚಂದ್ರ, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.