ಬೆಂಗಳೂರು, ಡಿ.6- ಮಲೆನಾಡು, ಪಶ್ಚಿಮಘಟ್ಟಕ್ಕೆ ಮಾರಕವಾಗಿರುವ ಕಸ್ತೂರಿ ರಂಗನ್ ಮತ್ತು ಗಾಡ್ಗೀಳ್ ವರದಿಯನ್ನು ತಿರಸ್ಕರಿಸಬೇಕೆಂದು ಮಲೆನಾಡು ಉಳಿಸಿ ಹೋರಾಟ ಸಮಿತಿ ಆಗ್ರಹಿಸಿದೆ.
ಶಾಸಕರ ಭವನದಲ್ಲಿ ಮಲೆನಾಡು ಮಿತ್ರವೃಂದ, ಮಲೆನಾಡು ಜನಪರ ಒಕ್ಕೂಟ, ಗ್ರಾಮ ಭಾರತ ಸೇರಿದಂತೆ ಹಲವು ಸಂಘಟನೆಗಳು ಮಾದವ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದ ಪಶ್ಚಿಮಘಟ್ಟ ಮತ್ತು ಮಲೆನಾಡನ್ನು ರಕ್ಷಿಸಲು ಸಾಧ್ಯವೇ ಎಂಬ ಕುರಿತ ನಡೆದ ದುಂಡು ಮೇಜಿನ ಸಭೆಯಲ್ಲಿ ಈ ಎರಡೂ ವರದಿಗಳ ಸಾಧಕ-ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಮಲೆನಾಡು ಜನರ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಲಾಯಿತು.
ಈ ಎರಡೂ ವರದಿಗಳು ಮಲೆನಾಡಿಗರ ಬದುಕನ್ನು ಕಸಿದುಕೊಳ್ಳುತ್ತವೆ. ಹಾಗಾಗಿ ಈ ವರದಿಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕೆಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.
ಮಾಜಿ ಸಂಸದ ಜಯಪ್ರಕಾಶ್ ಹೆಗಡೆ ಮಾತನಾಡಿ, ಅರಣ್ಯ ಇಲಾಖೆಯ ಕಾನೂನುಗಳೇ ಬಲಿಷ್ಠವಾಗಿವೆ. ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದರೆ ಅರಣ್ಯ, ಅರಣ್ಯ ವಾಸಿಗಳು ಹಾಗೂ ಮಲೆನಾಡಿಗರಿಗೂ ಅನುಕೂಲವಾಗುತ್ತದೆ. ಎಲ್ಲೋ ಸ್ಯಾಟಲೈಟ್ನಲ್ಲಿ ನೋಡಿ ವರದಿ ರೂಪಿಸುವುದರಿಂದ ಯಾವುದೆ ಪ್ರಯೋಜನವಾಗುವುದಿಲ್ಲ. ಕಾಡಿನೊಂದಿಗಿರುವ ಜನರ ಬದುಕಿನ ವಾಸ್ತವಾಂಶವನ್ನು ಅರಿತು ವರದಿ ರಚನೆಯಾಗಬೇಕು.
ಕೃಷಿ ಇದ್ದಲ್ಲಿ ಕಾಡು ಇರುತ್ತದೆ.ಕಾಡಿನ ಸಮೀಪವೇ ಕೃಷಿ ಮಾಡಬೇಕಾಗುತ್ತದೆ.ಅಲ್ಲಿರುವ ನಿವಾಸಿಗಳಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕು.ನಗರವಾಸಿಗಳಿಗೆ ರಸ್ತೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.ಆದರೆ, ಇಲ್ಲಿರುವವರಿಗೆ ಏಕೆ ಸೌಲಭ್ಯಗಳು ಬೇಡ ಎಂದು ಪ್ರಶ್ನಿಸಿದರು.
ಕಲ್ಕುಳಿ ವಿಠಲ್ ಹೆಗಡೆ ಮಾತನಾಡಿ, ಕೃಷಿಗೂ, ಅರಣ್ಯಕ್ಕೂ ಅವಿನಾಭಾವ ಸಂಬಂಧವಿದೆ.ಒಂದು ತೋಟ ಮಾಡಬೇಕಾದರೆ ಒಂದು ಕಾಡು ಇರಬೇಕು.ಅದಕ್ಕೆ ನಮ್ಮಲ್ಲಿ ಸೊಪ್ಪಿನ ಬೆಟ್ಟಗಳು ಇರುವುದು. ಮಲೆನಾಡು ಭಾಗದ ರೈತರು ಅವಲಂಬಿಸಿ ಬದುಕುತ್ತಿರುವ ಕೃಷಿ ಭೂಮಿಯನ್ನು ಕಸಿದುಕೊಂಡರೆ ಅವರ ಬದುಕು ಯತ್ತಸಾಗಬೇಕು ? ಈ ವರದಿಗಳ ಪ್ರಕಾರ ವಿದ್ಯುತ್, ರಸ್ತೆ, ಚರಂಡಿ, ತಾಂತ್ರಿಕತೆ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಅಳವಡಿಸುವಂತಿಲ್ಲ. ಹಾಗಾದರೆ ಮನುಷ್ಯ ಹೇಗೆ ಬದುಕಬೇಕು ? ನಗರ ವಾಸಿಗಳಿಗೆ ಮಾತ್ರ ಸೌಲಭ್ಯಗಳು ಬೇಕೆ ? ಕಾಡಂಚಿನಲ್ಲಿರುವವರಿಗೆ ಸೌಲಭ್ಯಗಳು ಬೇಡವೇ ಎಂದು ಪ್ರಶ್ನಿಸಿದರು.
ಮಡಿಕೇರಿಯಲ್ಲಿ ವಾಡಿಕೆಗಿಂತ ಶೇ.30ರಷ್ಟು ಹೆಚ್ಚು ಪ್ರಮಾಣದ ಮಳೆಯಾಗಿದ್ದರಿಂದ ಅಲ್ಲಿ ಅವಘಡಗಳು ಸಂಭವಿಸಿವೆ. ಗುಡ್ಡದ ಮೇಲೆ ಮಾಡಿರುವ ಕೆರೆಗಳಿಂದ ಅಲ್ಲ. 150 ವರ್ಷಗಳ ಹಿಂದಿನಿಂದಲೂ ಅಲ್ಲಿ ಕೆರೆಗಳಿವೆ ಎಂದು ಅವರು ಹೇಳಿದರು.
ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮಾಜಿ ಶಾಸಕರಾದ ಎ.ಕೆ.ಸುಬ್ಬಯ್ಯ, ವೈ.ಎಸ್.ವಿ.ದತ್ತಾ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಮುಖಂಡರಾದ ಕೆ.ವಿ.ಆರ್.ಠಾಗೂರ್, ಅಶೋಕ್, ಅನಿಲ್ ಹೊಸಕೊಪ್ಪ ಸೇರಿದಂತೆ ಮಲೆನಾಡು ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.