ಬೆಂಗಳೂರು, ಡಿ.6- ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ನಿರಂತರವಾಗಿ ಬಿಜೆಪಿ ನಾಯಕರು ನಡೆಸುತ್ತಿದ್ದಾರೆ ಎಂಬ ಧೋರಣೆ ಖಂಡಿಸಿ ಕೆಪಿಸಿಸಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಸಂವಿಧಾನಾತ್ಮಕವಾಗಿ ರಚನೆಯಾದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಸಮಿತಿಯ ಅಧ್ಯಕ್ಷ ಜಿ.ಜನಾರ್ಧನ್ ಆರೋಪಿಸಿದರು.
ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಡಿಸೆಂಬರ್ನಲ್ಲಿ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ದಾರೆ.ಅಲ್ಲದೆ, ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸಿದ ಸಂಭಾಷಣೆಯ ಆಡಿಯೋ ಬಹಿರಂಗವಾಗಿದೆ.ಕುದುರೆ ವ್ಯಾಪಾರ ಮಾಡುವ ಪ್ರಯತ್ನವನ್ನು ನಿರಂತರವಾಗಿ ಮುಂದುವರೆಸುತ್ತಾ ಬಂದಿದೆ.ಇದು ನಡೆಯುವುದಿಲ್ಲ ಎಂದರು.
ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ರಾಜಕೀಯ ಲಾಭಕ್ಕಾಗಿ ಆಧಾರ ರಹಿತ ಹೇಳಿಕೆಗಳನ್ನು ನೀಡಿ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ರೈತ ಪರವಾಗಿದ್ದು, ಸಾಲ ಮನ್ನಾ ಮಾಡುವ ಪ್ರಯತ್ನಕ್ಕೆ ಬಿಜೆಪಿ ನಾಯಕರು ಅಡ್ಡಿ ಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿಫಲತೆಯನ್ನು ಮುಚ್ಚಿಕೊಳ್ಳಲು ರಾಜ್ಯ ಬಿಜೆಪಿ ನಾಯಕರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕವಿಕಾ ಮಾಜಿ ಅಧ್ಯಕ್ಷ ಎಸ್.ಮನೋಹರ್ ಆರೋಪಿಸಿದರು.
ಸಲೀಂ, ಎ.ಆನಂದ್, ಹೇಮರಾಜ್, ರಾಮಕೃಷ್ಣ, ಆದಿತ್ಯ, ದರ್ಶನ್, ಎಂ.ಬಾಬು, ನವೀನ್ಕುಮಾರ್ ಮುಂತಾದವರಿದ್ದರು.