ಬೆಂಗಳೂರು,ಡಿ.6-ಬೆಳೆ ಸಾಲ ಮನ್ನಾ, ಕಬ್ಬು ಬೆಳೆಗಾರರ ಬಾಕಿ ಪಾವತಿ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ರೈತ ಮುಖಂಡರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಿಮ್ಮೊಂದಿಗೆ ಸರ್ಕಾರವಿದೆ. ಆತಂಕಪಡುವುದು ಬೇಡ.ಶಾಶ್ವತ ಪರಿಹಾರಕ್ಕೆ ಪ್ರಯತ್ನ ಮಾಡೋಣ ಎಂದು ಅಭಯ ನೀಡಿದರು.
ಇದುವರೆಗೂ ರೈತರ ವಿವಿಧ ಸಮಸ್ಯೆಗಳ ಬಗ್ಗೆ ನಾಲ್ಕು ಬಾರಿ ರೈತ ಮುಖಂಡರೊಂದಿಗೆ ಚರ್ಚೆ ನಡೆಸಿರುವ ಮುಖ್ಯಮಂತ್ರಿ ಇಂದು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ 5ನೇ ಬಾರಿಗೆ ರಾಜ್ಯದ ರೈತರು ಎದುರಿಸುತ್ತಿರುವ ಬೆಳೆ ಸಾಲ ಮನ್ನಾ ಸೇರಿದಂತೆ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು.
ರೈತರ ಸಾಲ ಮನ್ನಾ ವಿಷಯದಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತಿಲ್ಲ. ವೆಬ್‍ಸೈಟ್‍ನಲ್ಲಿ ಹೆಸರುಗಳು ಸಿಗುತ್ತಿಲ್ಲ. ಬ್ಯಾಂಕ್‍ನಲ್ಲಿ ಅರ್ಜಿ ಕೊಟ್ಟರೂ ಗೊಂದಲ ನೀಗಿಲ್ಲ. ರೈತರು ಬ್ಯಾಂಕ್‍ಗಳಲ್ಲಿ ಈ ಬಗ್ಗೆ ವಿಚಾರಿಸುವುದು ಕಷ್ಟಸಾದ್ಯವಾದಂತಹ ಪರಿಸ್ಥಿತಿ ಇದೆ. ಕೆಲ ರೈತರು ಬ್ಯಾಂಕ್‍ಗೆ ಹೋಗಲು ಹೆದರುತ್ತಾರೆ. ರೈತರ ಮೇಲೆ ಬ್ಯಾಂಕ್‍ಗಳ ದೌರ್ಜನ್ಯವೂ ನಿಂತಿಲ್ಲ. ಹಣ ಮರುಪಾವತಿ ಮಾಡದವರ ಮೇಲೆ ಒತ್ತಡ ಹೇರುವುದು, ನೋಟಿಸ್ ನೀಡುವುದು ನಿರಂತರವಾಗಿ ನಡೆಯುತ್ತಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಅನಗತ್ಯವಾಗಿ ಮೀನಾಮೇಷ ಎಣಿಸಲಾಗುತ್ತಿದೆ.ಬೆಳೆ ಸಾಲ ಮನ್ನಾ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಕಬ್ಬು ಬೆಳೆ ಬಾಕಿ ಪಾವತಿ ವಿಚಾರದಲ್ಲಿ 58 ಕೋಟಿ ಮಾತ್ರ ಬಾಕಿ ಇದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಸಕ್ಕರೆ ಕಾರ್ಖಾನೆ ಮಾಲೀಕರು ಆರಂಭದಲ್ಲಿ ಕಬ್ಬು ಖರೀದಿ ಮಾಡುವಾಗ ಒಪ್ಪಂದ ಮಾಡಿಕೊಂಡ ಅನುಸಾರವೇ ದರ ನೀಡಬೇಕು. ಸಕ್ಕರೆ ಬೆಲೆ ಹೆಚ್ಚಿದ್ದಾಗ ಕನಿಷ್ಟ ಬೆಲೆ ನೀಡುವುದು ಸರಿಯೇ. ಲಾಭ ಮಾಡಿಕೊಂಡ ನೀವು ರೈತರಿಗೆ ಅದರಲ್ಲಿ ಪಾಲು ಕೊಡದೆ ನಷ್ಟವನ್ನು ಮಾತ್ರ ರೈತರ ಮೇಲೆ ಹೊರಿಸುವುದು ಏಕೆ ಎಂದು ರೈತರು ಪ್ರಶ್ನಿಸಿದರು. ಹಳೇ ಒಪ್ಪಂದದ ಪ್ರಕಾರ ಸುಮಾರು 619 ಕೋಟಿ ರೂ. ರೈತರಿಗೆ ಬಾಕಿ ಕೊಡಬೇಕಿದೆ.ಇದಕ್ಕೆ ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಂಡಿವೆ ಎಂದರು.
ರೈತರ ಸಮಸ್ಯೆ, ಸಲಹೆ, ಆಕ್ಷೇಪಗಳನ್ನು ಸಾವಧಾನವಾಗಿ ಆಲಿಸಿದ ಮುಖ್ಯಮಂತ್ರಿಗಳು ನಿಮ್ಮ ಜೊತೆ ನಾವಿದ್ದೇವೆ. ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮುಖ್ಯ. ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸುವುದು ಬೇಡ. ಅದಕ್ಕಾಗಿ ಆಮಿಷವೊಡ್ಡಿ ದಾರಿ ತಪ್ಪಿಸುವ ಕೆಲಸ ಮಾಡಬಾರದು. ವಿಳಂಬವಾದರೂ ಶಾಶ್ವತ ಪರಿಹಾರ ಕಂಡುಕೊಳ್ಳೋಣ ಎಂದರು.