ಬೆಂಗಳೂರು, ಡಿ.6- ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದ ಹೈಕಮಾಂಡ್ ನಾಯಕರು ಈಗ ಅಧಿವೇಶನದ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ರಾಗ ಬದಲಿಸಿರುವುದಕ್ಕೆ ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನ ಹಿರಿಯ ಮುಖಂಡರಾದ ರಾಮಲಿಂಗಾರೆಡ್ಡಿ, ಎಂ.ಟಿ.ಬಿ.ನಾಗರಾಜ್ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕಂಪ್ಲಿ ಶಾಸಕ ಗಣೇಶ್ ಕೂಡ ಸಂಪುಟ ವಿಸ್ತರಣೆ ಆಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.ಉದ್ದೇಶ ಪೂರ್ವಕವಾಗಿಯೇ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗಿದೆ.ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರ ವೇದಿಕೆ ರಚಿಸುವ ತಯಾರಿ ನಡೆಯುತ್ತಿದೆ.
ಜಾತಿ ಆಧಾರದ ಮೇಲೆ ಸಂಪುಟ ವಿಸ್ತರಣೆ ಮಾಡಬಾರದು ಎಂದು ಸರ್ಕಾರದ ವಿರುದ್ಧ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ನನಗೆ ನಂಬಿಕೆ ಇಲ್ಲ. ಬೇಕೆಂದೇ ವಿಸ್ತರಣೆಯನ್ನು ಮುಂದೂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಹೊಸಕೋಟೆ ಕ್ಷೇತ್ರದ ಶಾಸಕ ಎಂ.ಟಿ.ಬಿ.ನಾಗರಾಜ್ ಕೂಡ ಹೈಕಮಾಂಡ್ ಧೋರಣೆಯನ್ನು ವಿರೋಧಿಸಿದ್ದಾರೆ. ಧನುರ್ಮಾಸದಲ್ಲಿ ಸಂಪುಟ ವಿಸ್ತರಣೆ ಮಾಡುತ್ತಾರೆಯೇ ? ಮಾಡಲು ಜೆಡಿಎಸ್ನವರು ಬಿಡುತ್ತಾರೆಯೇ?ಇವರೆಲ್ಲ ಸುಮ್ಮನೆ ಹೇಳುತ್ತಿದ್ದಾರೆ.ಈ ಹಿಂದೆಯೂ ಹಲವು ದಿನಾಂಕಗಳನ್ನು ನೀಡಿದ್ದರು ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಕಂಪ್ಲಿ ಶಾಸಕ ಗಣೇಶ್ ಕೂಡ ತಮ್ಮ ಅಸಮಾಧಾನವನ್ನು ಹೊರ ಹಾಕಿ, ಡಿ.22ರಂದು ಯಾವುದೇ ಕಾರಣಕ್ಕೂ ಸಚಿವ ಸಂಪುಟ ವಿಸ್ತರಣೆಯಾಗುವುದಿಲ್ಲ. ಲೋಕಸಭೆ ಚುನಾವಣೆಯ ನಂತರವೇ ನಡೆಯುವುದು.ಇವರು ಹೇಳಿದಂತೆ ಮಾಡುವುದಿಲ್ಲ ಎಂದು ಇಂದು ಸುದ್ದಿಗಾರರ ಜತೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರ ಜತೆ 40ಕ್ಕೂ ಹೆಚ್ಚು ಜನ ಇದ್ದೇವೆ. ಮುಂದೆ ಅವರೇ ಮುಖ್ಯಮಂತ್ರಿ ಆಗಬೇಕೆಂಬ ಅಭಿಲಾಷೆ ನಮ್ಮದು ಎಂದು ಹೇಳಿದ್ದಾರೆ.
ಇದೇ 10ರಿಂದ 21ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, 22ರಂದೇ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ, ಸಂಪುಟ ಕಾರ್ಯದರ್ಶಿಗಳ ನೇಮಕ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುತ್ತಿದ್ದಂತೆ ಆಕಾಂಕ್ಷಿಗಳು, ಇದು ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ.
ಈ ನಡುವೆ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಬೇಕೆಂದು ರಮೇಶ್ ಜಾರಕಿಹೊಳಿ ಅವರು ಈ ಹಿಂದೆ ಹಲವು ಪ್ರಯತ್ನ ನಡೆಸಿದ್ದು, ಮತ್ತೆ ತಮ್ಮ ಪ್ರಯತ್ನವನ್ನು ವಿವಿಧ ರೀತಿಯಲ್ಲಿ ಮುಂದುವರೆಸಿದ್ದಾರೆ.
ಈಗ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗಿರುವುದರಿಂದ ಆಕಾಂಕ್ಷಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ.ಸದ್ಯ ಸಂಪುಟ ವಿಸ್ತರಣೆ ಮಾಡಿದರೆ.ಭಿನ್ನಮತ ಸಹಜವಾಗಿಯೇ ಉಂಟಾಗುತ್ತದೆ.ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದ ಮೇಲೆ ಇದರ ಪರಿಣಾಮ ಬೀರುತ್ತದೆ. ಹಾಗಾಗಿ ಅಧಿವೇಶನದ ನಂತರ ಸಂಪುಟ ವಿಸ್ತರಣೆ ಮಾಡಲು ನಾಯಕರು ನಿರ್ಧರಿಸಿದ್ದಾರೆ.
ಇನ್ನು ಹಲವು ಶಾಸಕರಲ್ಲಿ ಅಸಮಾಧಾನವಿದ್ದರೂ ಮಾತನಾಡದೇ ಮೌನವಾಗಿದ್ದಾರೆ.ಈ ನಡುವೆ ಆಪರೇಷನ್ ಕಮಲದ ತಂತ್ರಗಾರಿಕೆಯನ್ನು ಬಿಜೆಪಿ ಮುಂದುವರೆಸಿದೆ.ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಮುಖಂಡರು ಪ್ರತಿ ತಂತ್ರವನ್ನು ಹೆಣೆಯುತ್ತಾ ಸರ್ಕಾರವನ್ನು ಸೇಫ್ ಮಾಡಿದ್ದಾರೆ.
ಈಗ ಸಂಪುಟ ವಿಸ್ತರಣೆ ಮಾಡಿದರೆ ಜೇನು ಗೂಡಿಗೆ ಕಲ್ಲು ಹೊಡೆದಂತಾಗುತ್ತದೆ.ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು. ಮುಂದೆ ನೊಡೋಣ ಎಂಬ ನಿರ್ಧಾರಕ್ಕೆ ನಾಯಕರು ಬಂದಂತಿದೆ.
ಜನವರಿಯಲ್ಲಿ ಸಂಪುಟ ವಿಸ್ತರಣೆ ಮಾಡದಿದ್ದರೆ, ಫೆಬ್ರವರಿಯಲ್ಲಿ ಬಹುತೇಕ ಲೋಕಸಭೆ ಚುನಾವಣೆಯ ಅಧಿಸೂಚನೆ ಹೊರ ಬೀಳುವ ಸಾಧ್ಯತೆ ಇದೆ. ಅಧಿಸೂಚನೆ ಹೊರ ಬಿದ್ದರೆ ಸಂಪುಟ ವಿಸ್ತರಣೆ ಮಾಡಲು ಸಾಧ್ಯವಾಗುವುದಿಲ್ಲ.ಲೋಕಸಭೆ ಚುನಾವಣೆ ನಂತರವೇ ಆ ಬಗ್ಗೆ ಚಿಂತಿಸಬೇಕಾಗುತ್ತದೆ.ಇದಕ್ಕಾಗಿ ಸರ್ಕಾರದವರು ಹಲವಾರು ನೆಪಗಳನ್ನು ಹೇಳುತ್ತಿದ್ದಾರೆ ಎಂದು ಸಚಿವಾಕಾಂಕ್ಷಿಗಳು ಆರೋಪಿಸಿದ್ದಾರೆ.
ಒಟ್ಟಾರೆ ಪ್ರತಿಪಕ್ಷಗಳ ವಿರೋಧ, ರೈತರ ವಿರೋಧ, ಕಬ್ಬಿನ ದರಕ್ಕೆ ಆಗ್ರಹಿಸಿ ಪ್ರತಿಭಟನೆ ಇವೆಲ್ಲವುಗಳ ನಡುವೆ ಸಚಿವ ಸಂಪುಟ ವಿಸ್ತರಣೆಯ ಸ್ವಪಕ್ಷೀಯರ ಆಗ್ರಹದ ಅಸಮಾಧಾನವನ್ನು ಮೈತ್ರಿ ಸರ್ಕಾರ ಎದುರಿಸಬೇಕಾಗಿದೆ.
ಯಾರೂ ಅಸಮಾಧಾನಗೊಂಡಿಲ್ಲ, ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ನಾವೆಲ್ಲ ಒಟ್ಟಾಗಿದ್ದೇವೆ. ಸರ್ಕಾರ ಕಲ್ಲು ಬಂಡೆಯಂತಿದೆ. ಐದು ವರ್ಷ ಸುಭದ್ರವಾಗಿ ಆಡಳಿತ ನಡೆಸಲಿದೆ ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಹೇಳಿದ್ದರೂ ಕೂಡ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.