ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ಹಿಂದೆ ಪ್ರತಿಪಕ್ಷಗಳ ಕೈವಾಡ

ನವದೆಹಲಿ/ಚೆನ್ನೈ, ಡಿ.5-ಸಾಲ ಮನ್ನಾ ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯಲ್ಲಿ ನಡೆದ ರೈತರ ಬೃಹತ್ ಕಿಸಾನ್ ಮೋರ್ಚಾದ ಹಿಂದೆ ಇತ್ತು ಎನ್ನಲಾದ ದುರುದ್ದೇಶಕ್ಕೆ ಪುಷ್ಟಿ ನೀಡುವ ಸಂಗತಿಗಳು ಬಯಲಾಗುತ್ತಿವೆ.
ತಮ್ಮ ರಾಜಕೀಯ ಹಿತಾಸಕ್ತಿಯ ಬೆಳೆ ಬೇಯಿಸಿಕೊಳ್ಳಲು ಎಡ ಪಕ್ಷ ಸಂಘಟನೆಗಳು ಮತ್ತು ವಿರೋಧಪಕ್ಷಗಳು ರೈತರ ಬೃಹತ್ ಪ್ರತಿಭಟನೆಯನ್ನು ವೇದಿಕೆಯನ್ನಾಗಿ ದುರುಪಯೋಗ ಮಾಡಿಕೊಂಡಿವೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಕೆಲವು ವಾಸ್ತವ ಸಂಗತಿಗಳು ಬೆಳಕಿಗೆ ಬಂದಿವೆ.

ಕಿಸಾನ್ ಮೋರ್ಚಾ ರ್ಯಾಲಿಯನ್ನು ಪ್ರತಿಪಕ್ಷಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಬಳಸಿಕೊಂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಚೋದನೆ ನೀಡಿದವು ಎಂಬ ಬಗ್ಗೆ ವ್ಯಾಪಕ ಟೀಕೆಗಳೂ ವ್ಯಕ್ತವಾಗುತ್ತಿವೆ.

ಈ ರ್ಯಾಲಿಯಲ್ಲಿ ಬಡ ರೈತರ ಸೋಗಿನಲ್ಲಿ ಭಾಗವಹಿಸಿದ್ದ ಕೆಲವು ರೈತರ ಹಿನ್ನೆಲೆ ಬಗ್ಗೆ ಈಗ ಅನೇಕ ಪ್ರಶ್ನೆಗಳು ಉದ್ಭಸುತ್ತಿವೆ. ಇದಕ್ಕೊಂದು ಉದಾಹರಣೆ ಎಂದರೆ ತಮಿಳುನಾಡಿನ ಕೃಷಿಕ ಅಯ್ಯಕಣ್ಣು. ಇವರು ಅನೇಕ ಬಡರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಾಸ್ತವವಾಗಿ ತಿರುಚಿರಾಪಳ್ಳಿಯ ಅಯ್ಯಕಣ್ಣು ಹಿನ್ನೆಲೆ ಬೆಚ್ಚಿ ಬೀಳಿಸುವಂಥದ್ದು. ಇವರ ಬಡ ರೈತರೇನಲ್ಲ. ಅತ್ಯಂತ ಸಿರಿವಂತರು. ಇವರು ಅನೇಕ ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳಿವೆ. 68 ವರ್ಷದ ಈ ಸಿರಿವಂತನ ಬಳಿ ಭವ್ಯ ಬಂಗಲೆ, ಐಷಾರಾಮಿ ಆಡಿ ಕಾರು ಇದೆ. ತಮಿಳುನಾಡಿನ ಮರಳು ಮಾಫಿಯಾ ದಂಧೆಯಲ್ಲಿ ಇವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು ಎಂದು ವರದಿಗಳು ಹೇಳಿವೆ.

ಸತ್ತ ಇಲಿ, ಹಾವು ತಿಂದು ಪ್ರತಿಭಟನೆ :
ರೈತರ ಪರ ಹೋರಾಡುವುದಾಗಿ ಹೇಳಿಕೊಂಡು ಅಯ್ಯಕಣ್ಣು ಹಲವಾರು ಚಳವಳಿಗಳ ನೇತೃತ್ವ ವಹಿಸಿದ್ದಾರೆ. ಇವರು ನಡೆಸುವ ಪ್ರತಿಭಟನೆಗಳು ತೀರಾ ವಿಭಿನ್ನ ಮತ್ತು ವಿಲಕ್ಷಣ. ಆ ಮೂಲಕ ಮಾಧ್ಯಮಗಳಲ್ಲಿ ದೊಡ್ಡ ಪ್ರಚಾರ ಗಿಟ್ಟಿಸುವ ತಂತ್ರವೂ ಇವರಿಗೆ ಕರಗತ.

ಪ್ರತಿಭಟನೆ ವೇಳೆ ಕೃಷಿಕರನ್ನು ಅರೆನಗ್ನರನ್ನಾಗಿ, ಮೃತ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ರೈತರು ಧರಿಸುವಂತೆ ಮಾಡುತ್ತಾರೆ. ಅಲ್ಲದೆ, ಸತ್ತ ಇಲಿ ಮತ್ತು ಹಾವುಗಳನ್ನು ರೈತರೇ ತಿನ್ನುವಂತೆ ಬಾಯಲ್ಲಿ ಇಡುತ್ತಾರೆ.

ಕಿಸಾನ್ ಮೋರ್ಚಾ ಪ್ರತಿಭಟನೆ ವೇಳೆಯೂ ಅಯ್ಯಕಣ್ಣು ನೇತೃತ್ವದ ರೈತರು ಇದೇ ರೀತಿ ವಿಶೇಷ ಗಮನಸೆಳೆದರು. ಇವರು 1,200ಕ್ಕೂ ಹೆಚ್ಚು ರೈತರನ್ನು ತಮ್ಮ ಸ್ವಂತ ಖರ್ಚಿನಲ್ಲಿ ದೆಹಲಿಗೆ ಕರೆತಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದರು. ಬಹುತೇಕ ಎಲ್ಲ ವಾರ್ತಾವಾಹಿನಿಗಳು ಮತ್ತು ಪತ್ರಿಕೆಗಳಲ್ಲಿ ಅಯ್ಯಕಣ್ಣು ತಂಡದ ಪ್ರತಿಭಟನಾನಿರತ ರೈತರ ವೀಡಿಯೋ ಮತ್ತು ಚಿತ್ರಗಳು ವಿಶೇಷ ಗಮನಸೆಳೆದವು.

ಅಯ್ಯಕಣ್ಣು ವಿವಾದದ ಕೇಂದ್ರ ಬಿಂದು. ಕಳೆದ ವರ್ಷ ಮಾರ್ಚ್‍ನಲ್ಲಿ ಇವರು ಬಿಜೆಪಿ ಮಹಿಳಾ ಕಾರ್ಯಕರ್ತೆ ಜೊತೆ ಜಗಳವಾಡಿ ಅನುಚಿತವಾಗಿ ವರ್ತಿಸಿದ್ದರು. ತತ್ಪರಿಣಾಮವಾಗಿ ಆಕೆ ಇವರಿಗೆ ಕಪಾಳಮೋಕ್ಷ ಮಾಡಿದ್ದರು. 2017ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾ, ಅಯ್ಯಕಣ್ಣು ಮಹಾ ವಂಚಕ, ಬ್ಯಾಂಕುಗಳಿಂದ ಸಾಲ ಪಡೆದು ನಾಮ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಆರಂಭದಿಂದಲೂ ಬಿಜೆಪಿ ವಿರೋಧಿಯಾಗಿರುವ ಇವರು ತಮಿಳುನಾಡಿನಲ್ಲಿ ಕೇಸರಿ ಪಕ್ಷ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ವಿವಾದದ ವ್ಯಕ್ತಿ.

ಕಿಸಾನ್ ಮೋರ್ಚಾ ರ್ಯಾಲಿಯಲ್ಲಿ ಭಾಗವಹಿಸಿದ ಕೆಲವರು ಇದೇ ರೀತಿಯ ಹಿನ್ನೆಲೆ ಹೊಂದಿರುವ ಸಂಗತಿ ಈಗ ಬಯಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ