ಬೆಂಗಳೂರು, ಡಿ.5- ನಾನು ಚೆನ್ನಾಗಿದ್ದೀನಿ ಎಲ್ಲರೂ ಕರೀತಾರೆ… ಹೋಗಲಿಲ್ಲ ಅಂದರೆ ಅಧಿಕಾರ ತಪ್ಪಿಸ್ತಾರೆ…
ಇಂತಹದ್ದೊಂದು ಗಂಭೀರ ಆರೋಪ ಮಾಡಿರುವುದು ಅಟ್ಟೂರು ವಾರ್ಡ್‍ನ ಬಿಜೆಪಿ ಸದಸ್ಯೆ ನೇತ್ರಾ ಪಲ್ಲವಿ ಅವರು.
12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಇಂದು ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್, ಶಾಸಕರಾದ ಎಸ್.ಆರ್.ವಿಶ್ವನಾಥ್, ಸತೀಶ್‍ರೆಡ್ಡಿ, ಉದಯ್ ಗರುಡಾಚಾರ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಚರ್ಚೆ ನಡೆಯಿತು.
ಯಲಹಂಕ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.3ರ ಅಟ್ಟೂರು ವಾರ್ಡ್ ಬಿಜೆಪಿ ಸದಸ್ಯೆ ನೇತ್ರಾ ಪಲ್ಲವಿ ಅವರು ಸ್ಥಾಯಿ ಸಮಿತಿ ಸದಸ್ಯತ್ವಕ್ಕೆ ಆಕಾಂಕ್ಷಿ ಆಗಿದ್ದರು.
ಎಲ್ಲ ಸಮಿತಿಗೂ ಬಿಜೆಪಿಯವರಿಗೆ ಐದು ಸದಸ್ಯ ಸ್ಥಾನ ಸಿಕ್ಕಿದೆ.60 ಜನರಿಗೆ ಅವಕಾಶ ಸಿಕ್ಕಿದೆ.ಉಳಿದ 40 ಮಂದಿಗೆ ಸಿಗಲಿಲ್ಲ. ಹಾಗಾಗಿ ನೇತ್ರಾ ಪಲ್ಲವಿಗೂ ಸದಸ್ಯತ್ವ ಕೈ ತಪ್ಪಿದೆ.
ಇದರಿಂದ ವಿಚಲಿತರಾದ ನೇತ್ರಾ ಪಲ್ಲವಿ ಪಾಲಿಕೆ ಆವರಣದಲ್ಲಿ ಅಳುತ್ತಾ ಇದ್ದರು.ಈ ಸಂದರ್ಭದಲ್ಲಿ ಮಾಧ್ಯಮದವರು ಏಕೆ ಅಳುತ್ತಿದ್ದೀರಾ ಎಂದು ಪ್ರಶ್ನಿಸಿದಾಗ, ನಾನು ಚೆನ್ನಾಗಿದ್ದೀನಿ, ಕೆಲವರು ಕರೆದಾಗ ಹೋಗಲ್ಲ. ಹಾಗಾಗಿ ನನಗೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನ ಕೈ ತಪ್ಪಿಸಿದ್ದಾರೆ ಎಂದು ಅಳುತ್ತಾ ಹೇಳಿದರು.
ಕೋಪದ ಕೈಗೆ ಬುದ್ಧಿ ಕೊಟ್ಟು ಮಾತನಾಡಿದ ಮೇಲೆ ನೇತ್ರಾ ಪಲ್ಲವಿ ಎಚ್ಚೆತ್ತುಕೊಂಡರು. ಮೀ-ಟೂ ಆರೋಪ ಹೊರಿಸಿದ ನಂತರ ನಾನು ಹೇಳಿದ್ದೆಲ್ಲಾ ಆಫ್ ದ ರೆಕಾರ್ಡ್ ಎಂದರು.ಆದರೆ, ಅಷ್ಟರಲ್ಲಾಗಲೇ ಕೆಲವು ಮಾಧ್ಯಮಗಳಲ್ಲಿ ಇವರ ಹೇಳಿಕೆ ಪ್ರಸಾರವಾಗಿ ಬಿಟ್ಟಿತ್ತು.
ಇದಕ್ಕೆಲ್ಲ ಬಿಜೆಪಿ ನಾಯಕರು ಏನು ಹೇಳುತ್ತಾರೋ..?