ಬಸ್ಸಾರ್ ಜಿಲ್ಲೆಯಲ್ಲಿ ಮತ್ತೆ ನಕ್ಸಲರ ಅಟ್ಟಹಾಸ

ರಾಯ್‍ಪುರ್, ಡಿ.5- ಛತ್ತೀಸ್‍ಗಢದ ಬಸ್ತಾರ್ ಜಿಲ್ಲೆಯಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಪೊಲೀಸ್ ಮಾಹಿತಿದಾರರಾದ ಇಬ್ಬರು ಮಾಜಿ ನಕ್ಸಲರನ್ನು ಮಾವೋವಾದಿಗಳು ಹತ್ಯೆ ಮಾಡಿದ್ಧಾರೆ.

ಜಲ್ಲು ಮತ್ತು ಭೀಮಾ ಕಗ್ಗೊಲೆಯಾದ ಇಬ್ಬರು ಮಾಜಿ ನಕ್ಸಲರು. ಇವರು ಎರಡು ವರ್ಷಗಳ ಹಿಂದೆ ಪೊಲೀಸರಿಗೆ ಶರಣಾಗತರಾಗಿದ್ದರು. ನಂತರ ಬಸ್ತಾರ್ ಪ್ರದೇಶದಲ್ಲಿ ಪೊಲೀಸ್ ಇಲಾಖೆಗಾಗಿ ರಹಸ್ಯ ಮಾಹಿತಿದಾರರಾಗಿ ನಕ್ಸಲರ ಬಗ್ಗೆ ಮಾಹಿತಿಗಳನ್ನು ನೀಡುತ್ತಿದ್ದರು.

ಇದರಿಂದ ಕುಪಿತಗೊಂಡಿದ್ದ ಮಾವೋವಾದಿಗಳು ಇವರನ್ನು ಮುಗಿಸಲು ಸಮಯ ಕಾಯುತ್ತಿದ್ದರು. ಜಲ್ಲು ಮತ್ತು ಭೀಮಾ ನಿನ್ನೆ ಸಂಜೆ ಫಾಖನರ್ ಗ್ರಾಮದ ವಾರದ ಸಂತೆಗೆ ಹೋಗುತ್ತಿದ್ದಾಗ ನಕ್ಸಲರ ಗುಂಪು ಅವರಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಹಾಕಿದರು. ನಂತರ ಇವರಿಬ್ಬರ ಶವಗಳನ್ನು ಫಾಖನರ್ ಪೊಲೀಸ್ ಔಟ್‍ಪೊಸ್ಟ್ ಬಳಿ ಎಸೆದು ಪರಾರಿಯಾದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಂತಕ ನಕ್ಸಲರ ಬಗ್ಗೆ ಮಾಹಿತಿ ಲಭಿಸಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಸ್ತರ್ ಜಿಲ್ಲೆಯ ಪೊಲೀಸ್ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ