ಬೆಂಗಳೂರು, ಡಿ.5- ಬಿಬಿಎಂಪಿ ಉಪ ಮೇಯರ್ ಆಗಿ ನಾಗಪುರ ವಾರ್ಡ್ನ ಜೆಡಿಎಸ್ ಸದಸ್ಯ ಭದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದು, ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ಬಿಜೆಪಿಗೆ ಮತ್ತೆ ಮುಖಭಂಗವಾಗಿದೆ.
ಅ.5ರಂದು ತೀವ್ರ ಹೃದಯಾಘಾತದಿಂದ ಜೆಡಿಎಸ್ನ ರಮಿಳಾ ಉಮಾಶಂಕರ್ ನಿಧನರಾಗಿದ್ದರಿಂದ ಉಪಮೇಯರ್ ಸ್ಥಾನ ತೆರವಾಗಿತ್ತು.ಅದಕ್ಕಾಗಿ ಇಂದು ಚುನಾವಣೆ ನಡೆಸಲಾಯಿತು.
ಪಕ್ಷೇತರ ಸದಸ್ಯರನ್ನು ಸೆಳೆದು ಉಪಮೇಯರ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿತ್ತು. ಆದರೆ, ಪಕ್ಷೇತರ ಸದಸ್ಯರು ಮತ್ತೆ ಕೈ ಕೊಟ್ಟಿದ್ದು, ಕೊನೆ ಗಳಿಗೆಯಲ್ಲಿ ನಿರ್ಧಾರ ಬದಲಿಸಿದ ಬಿಜೆಪಿ ಶಾಸಕ ಆರ್.ಅಶೋಕ್ ಮತ್ತಿತರರು ಉಪಮೇಯರ್ ಚುನಾವಣೆಗೆ ತಮ್ಮ ಪಕ್ಷದಿಂದ ಯಾರನ್ನೂ ಕಣಕ್ಕಿಳಿಸದಿರಲು ನಿರ್ಧರಿಸಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ಪಾಲಿಕೆಯಲ್ಲೂ ಮೈತ್ರಿ ಮುಂದುವರಿಸಿವೆ.
ಈಗಾಗಲೇ ಕಾಂಗ್ರೆಸ್ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಯರ್ ಆಗಿದ್ದು, ಎರಡೂ ಪಕ್ಷಗಳ ಮುಖಂಡರ ತೀರ್ಮಾನದಂತೆ ಭದ್ರೇಗೌಡ ಅವರು ಉಪಮೇಯರ್ ಅಭ್ಯರ್ಥಿಯಾದರು.ಬಿಜೆಪಿ ಆಪರೇಷನ್ ಕಮಲ ಮಾಡಿ ಪಕ್ಷೇತರರನ್ನು ಹಿಡಿತದಲ್ಲಿಟ್ಟುಕೊಂಡಿದ್ದರಿಂದ ಈ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು.
ಆದರೆ, ಬಿಜೆಪಿ ಚುನಾವಣೆಯಿಂದ ಹಿಂದೆ ಸರಿದಿದ್ದರಿಂದ ಭದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಬಿಜೆಪಿ ಮತ್ತೆ ಮುಖಭಂಗ ಅನುಭವಿಸಿದೆ.
ಉಪಮೇಯರ್ ಚುನಾವಣೆಗೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಅವರು ನಾಗಪುರ ವಾರ್ಡ್ನ ಭದ್ರೇಗೌಡ ಅವರು ಉಪಮೇಯರ್ ಆಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು.
ಚುನಾವಣಾಧಿಕಾರಿಗಳು ಭದ್ರೇಗೌಡರ ಹೆಸರು ಘೋಷಿಸುತ್ತಿದ್ದಂತೆ ಜೆಡಿಎಸ್-ಕಾಂಗ್ರೆಸ್ ಸದಸ್ಯರು ಅವರಿಗೆ ಅಭಿನಂದನೆ ಸಲ್ಲಿಸಿದರು.ಭಾರೀ ಗಾತ್ರದ ಹಾರ ಹಾಕಿ ಸದಸ್ಯರು ಹಾಗೂ ಎರಡೂ ಪಕ್ಷಗಳ ಕಾರ್ಯಕರ್ತರು ಸಂಭ್ರಮಿಸಿದರು.