ತಮಿಳುನಾಡಿನಾದ್ಯಂತ ಜಯಲಲಿತಾ ಅವರ 2ನೇ ವರ್ಷದ ಪುಣ್ಯತಿಥಿ ಆಚರಣೆ

ಚೆನ್ನೈ, ಡಿ.5- ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನರಾಗಿ ಇಂದಿಗೆ ಎರಡು ವರ್ಷ. ರಾಜ್ಯಾದ್ಯಂತ ಜಯಾ ಅವರ ಪುಣ್ಯತಿಥಿಯನ್ನು ಅಸಂಖ್ಯಾತ ಮಂದಿ ಆಚರಿಸಿ ಅಗಲಿದ ನಾಯಕಿಗೆ ಗೌರವ-ಶ್ರದ್ಧಾಂಜಲಿ ಸಮರ್ಪಿಸಿದರು.

ರಾಜಧಾನಿ ಚೆನ್ನೈನ ಮರೀನಾ ಬೀಚ್‍ನಲ್ಲಿರುವ ಪುರುಚ್ಚಿ ತಲೈವಿ ಜಯಾ ಅವರ ಸಮಾಧಿಗೆ ಇಂದು ಮುಂಜಾನೆಯಿಂದಲೇ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಭಿಮಾನಿಗಳು ಅಶ್ರುತರ್ಪಣ ಸಲ್ಲಿಸಿದರು.

ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, ಸಂಪುಟ ಸಹೋದ್ಯೋಗಿಗಳು, ಪಕ್ಷದ ಮುಖಂಡರು, ಪಕ್ಷದ ಉಚ್ಛಾಟಿತ ನಾಯಕ ಟಿ.ಟಿ.ವಿ.ದಿನಕರನ್, ಜಯಾ ಅವರ ಸೋದರನ ಪುತ್ರಿ ದೀಪಾ ಜಯಕುಮಾರ್ ಸೇರಿದಂತೆ ಅನೇಕ ಗಣ್ಯರು ಜಯಾ ಸಮಾಧಿಗೆ ಪುಷ್ಪ ನಮನ ಸಮರ್ಪಿಸಿದರು.
ಚೆನ್ನೈ ಸೇರಿದಂತೆ ವಿವಿಧೆಡೆ ಮೌನ ಪ್ರತಿಭಟನೆ ಮತ್ತು ಸಂತಾಪ ಸೂಚಕ ಸಭೆಗಳನ್ನು ಆಯೋಜಿಸಿ ತಮ್ಮ ನೆಚ್ಚಿನ ನಾಯಕಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ರಾಜ್ಯದ ವಿವಿಧೆಡೆ ಜಯಾ ಅವರ ಎರಡನೆ ವಾರ್ಷಿಕ ಪುಣ್ಯತಿಥಿ ಅಂಗವಾಗಿ ರಕ್ತದಾನ, ನೇತ್ರದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರಗಳು ನಡೆದವು. ಕಾರ್ಯಕರ್ತರು ಅನ್ನಸಂತರ್ಪಣೆ, ವಸ್ತ್ರದಾನ ಮೊದಲಾದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅಣ್ಣಾ ಡಿಎಂಕೆ ಪಕ್ಷವನ್ನು ಶಕ್ತಿಶಾಲಿಯಾಗಿ ಸಂಘಟಿಸಿದ್ದ ಜಯಾ ಅವರ ಅನುಪಸ್ಥಿತಿ ತಮಿಳುನಾಡಿನ ರಾಜಕಾರಣ ಮತ್ತು ರಾಜ್ಯ ಸರ್ಕಾರಕ್ಕೆ ಬಹುವಾಗಿ ಕಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ