ಬೆಂಗಳೂರು,ಡಿ.5- ತಮಗೆ ಅದೃಷ್ಟದ ಮನೆ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಸರ್ಕಾರಿ ನಿವಾಸವನ್ನೇ ತಿರಸ್ಕರಿಸಿದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೊನೆಗೂ ಸರ್ಕಾರಿ ಬಂಗಲೆಗೆ ತೆರಳಲು ತೀರ್ಮಾನಿಸಿದ್ದಾರೆ.
ಗಾಂಧಿಭವನದ ಹಿಂಭಾಗದಲ್ಲಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನಿಗದಿಪಡಿಸಿರುವ ಬಂಗಲೆ ಸಮೀಪ ಯಡಿಯೂರಪ್ಪನವರಿಗೆ ಸಂಖ್ಯೆ 4 ಸರ್ಕಾರಿ ನಿವಾಸವನ್ನು ನಿಗದಿಪಡಿಸಲಾಗಿದ್ದು, ಸದ್ಯದಲ್ಲೇ ಅಲ್ಲಿಗೆ ಶಿಫ್ಟ್ ಆಗಲಿದ್ದಾರೆ.
ಈ ಹಿಂದೆ ವಿಧಾನಪರಿಷತ್ ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರು ಇದೇ ನಿವಾಸದಲ್ಲಿ ಇದ್ದರು. ಇದೀಗ ಇದೇ ಮನೆಯನ್ನು ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ(ಡಿಪಿಎಆರ್) ಯಡಿಯೂರಪ್ಪನವರಿಗೆ ಮಂಜೂರು ಮಾಡಿದೆ.
ಖ್ಯಾತ ಜ್ಯೋತಿಷಿ ಒಬ್ಬರ ನಿರ್ದೇಶನದಂತೆ ಬಂಗಲೆಯನ್ನು ನವೀಕರಣ ಮಾಡಲಾಗುತ್ತಿದ್ದು, ವಾಸ್ತುದೋಷ ಸರಿ ಹೋದ ನಂತರ ಬಿಎಸ್ವೈ ಇಲ್ಲಿಗೆ ಬರಲಿದ್ದಾರೆ.
ಬೆಳಗಾವಿ ಅಧಿವೇಶನ ಮುಗಿದ ಬಳಿಕ ಹೊಸ ಮನೆಗೆ ಬಿಎಸ್ವೈ ಗೃಹಪ್ರವೇಶ ಮಾಡಲಿದ್ದು, ಜ್ಯೋತಿಷಿಗಳ ಸಲಹೆ ಮೇರೆಗೆ ಹಾಗೂ ಪುತ್ರರಾದ ವಿಜಯೇಂದ್ರ ಮತ್ತು ರಾಘವೇಂದ್ರ ಅವರ ಇಷ್ಟಕ್ಕನುಗುಣವಾಗಿ ಬಂಗಲೆಯನ್ನು ನವೀಕರಣ ಮಾಡುವ ಕಾರ್ಯ ಬರದಿಂದ ಸಾಗಿದೆ ಎಂದು ತಿಳಿದುಬಂದಿದೆ.
ಅದೃಷ್ಟದ ಮನೆ ಸಿಗಲಿಲ್ಲ:
ಯಡಿಯೂರಪ್ಪ ತಮ್ಮ ಪಾಲಿಗೆ ರೇಸ್ಕೋರ್ಸ್ ರಸ್ತೆಯಲ್ಲಿರುವ ನಿವಾಸವನ್ನು ಅದೃಷ್ಟದ ಮನೆಯೆಂದೇ ಭಾವಿಸಿದ್ದರು.2006ರಲ್ಲಿ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದ ವೇಳೆ ಹಾಗೂ 2008ರಿಂದ 2011ರವರೆಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಇದೇ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು.
ಬಿಎಸ್ವೈ ಪಾಲಿಗೆ ಇದು ಅದೃಷ್ಟದ ಮನೆ ಎಂದೇ ಹೇಳಲಾಗುತ್ತದೆ. ಈ ಮನೆಗೆ ಬಂದ ವೇಳೆ ಅವರಿಗೆ ಅಧಿಕಾರ ಸಿಕ್ಕಿತ್ತು ಎಂದು ಭಾವಿಸಿದ್ದಾರೆ.
ಬಿಎಸ್ವೈಗೆ ಈ ಹಿಂದೆ ರೇಸ್ಕೋರ್ಸ್ ರಸ್ತೆಯ ನಂ.2 ಸಂಖ್ಯೆಯ ಮನೆಯನ್ನು ಡಿಪಿಎಆರ್ ವತಿಯಿಂದ ನಿಗದಿ ಮಾಡಲಾಗಿತ್ತು.ಸರ್ಕಾರ ಮನೆ ಕೊಡುವುದಾದರೆ ರೇಸ್ಕೋರ್ಸ್ ರಸ್ತೆಯಲ್ಲಿರುವ ನಿವಾಸವನ್ನೇ ಕೊಡಬೇಕೆಂದು ಯಡಿಯೂರಪ್ಪ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಆದರೆ ಯಡಿಯೂರಪ್ಪನವರ ಅದೃಷ್ಟದ ಮನೆಯನ್ನು ಹಾಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ಗೆ ನೀಡಲಾಗಿತ್ತು.ಇದೀಗ ಗಾಂಧಿಭವನದ ಹಿಂಭಾಗದಲ್ಲಿರುವ ನಿವಾಸವನ್ನು ನೀಡಿರುವುದರಿಂದ ಸದ್ಯದಲ್ಲೇ ಬಿಎಸ್ವೈ ಸರ್ಕಾರಿ ನಿವಾಸಕ್ಕೆ ಆಗಮಿಸಲಿದ್ದಾರೆ.