ಬೆಂಗಳೂರು, ಡಿ.5- ಬಿಬಿಎಂಪಿಯ ಹನ್ನೆರಡು ಸ್ಥಾಯಿ ಸಮಿತಿಗಳಿಗೆ ತಲಾ 11 ಸದಸ್ಯರ ಆಯ್ಕೆಗೆ ಇಂದು ಚುನಾವಣೆ ನಡೆಯಿತು.
ಜೆಡಿಎಸ್-ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ಸೇರಿ ತಲಾ ಆರು ಮಂದಿ ಹಾಗೂ ಬಿಜೆಪಿಯ ತಲಾ ಐದು ಮಂದಿ ಸೇರಿ 11ರಂತೆ 12 ಸ್ಥಾಯಿಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಕಳಸದ್ ಅವರು ಚುನಾವಣಾ ಪ್ರಕ್ರಿಯೆ ನಡೆಸಿದರು.ಸದಸ್ಯರ ಆಯ್ಕೆ ನಂತರ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಿಸಲಾಗುತ್ತದೆ.
ಸಂಭವನೀಯ ಅಧ್ಯಕ್ಷರು:
ಕಾಂಗ್ರೆಸ್:
ಸೌಮ್ಯ ಶಿವಕುಮಾರ್- ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಲಾವಣ್ಯ ಗಣೇಶ್‍ರೆಡ್ಡಿ- ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ, ಸುಜಾತಾ ರಮೇಶ್- ಅಪೀಲು (ಮೇಲ್ಮನೆ) ಸ್ಥಾಯಿ ಸಮಿತಿ, ವೇಲು ನಾಯ್ಕರ್- ಲೆಕ್ಕಪತ್ರ ಸ್ಥಾಯಿ ಸಮಿತಿ, ಫರೀದಾ ಇಸ್ತಿಯಾಕ್- ಮಾರುಕಟ್ಟೆ ಸ್ಥಾಯಿ ಸಮಿತಿ.
ಜೆಡಿಎಸ್:
ಹೇಮಲತಾ ಗೋಪಾಲಯ್ಯ- ತೆರಿಗೆ ಮತ್ತು ಆರ್ಥಿ ಸ್ಥಾಯಿ ಸಮಿತಿ, ಉಮೀಸಲ್ಮಾ- ವಾರ್ಡ್ ವಕ್ರ್ಸ್ ಕಾಮಗಾರಿ ಸ್ಥಾಯಿ ಸಮಿತಿ, ಇಮ್ರಾನ್ ಪಾಷ- ಶಿಕ್ಷಣ ಸ್ಥಾಯಿ ಸಮಿತಿ, ಐಶ್ವರ್ಯ ನಾಗರಾಜ್- ತೋಟಗಾರಿಕೆ ಸ್ಥಾಯಿ ಸಮಿತಿ.
ಪಕ್ಷೇತರರು:
ಚಂದ್ರಪ್ಪರೆಡ್ಡಿ- ನಗರ ಯೋಜನೆ ಸ್ಥಾಯಿ ಸಮಿತಿ, ಮುಜಾಯಿದ್ ಪಾಷ- ಆರೋಗ್ಯ ಸ್ಥಾಯಿ ಸಮಿತಿ, ಆನಂದ್‍ಕುಮಾರ್- ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ.
ಗುಂಡಣ್ಣಗೆ ಕೊಕ್:
ನಮ್ಮ ಬೆಂಬಲದಿಂದಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿದೆ.ನಮಗೇ ಉಪಮೇಯರ್ ಸ್ಥಾನ ಬಿಟ್ಟುಕೊಡಬೇಕು. ಇಲ್ಲದಿದ್ದಲ್ಲಿ ಪ್ರಮುಖ ಸ್ಥಾಯಿ ಸಮಿತಿಯನ್ನಾದರೂ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದು ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಪಕ್ಷಗಳೊಂದಿಗೆ ಆಟ ಆಡಿದ್ದ ದೊಮ್ಮಲೂರು ವಾರ್ಡ್ ಸದಸ್ಯ ಗುಂಡಣ್ಣ ಅವರಿಗೆ ಈ ಬಾರಿ ಯಾವುದೇ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ.
ತೆರಿಗೆ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ನನಗೆ ಕೊಡುತ್ತಾರೆ. ಇದಕ್ಕೆ ಜೆಡಿಎಸ್-ಕಾಂಗ್ರೆಸ್ ನಾಯಕರು ಒಪ್ಪಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ಗುಂಡಣ್ಣ ಅವರಿಗೆ ಎರಡೂ ಪಕ್ಷಗಳು ತಕ್ಕ ಪಾಠ ಕಲಿಸಿವೆ.
ಸ್ಥಾಯಿ ಸಮಿತಿ ಚುನಾವಣೆಗೆ ತೊಡರಾದ ಶಾಸಕ ಎಸ್‍ಟಿಎಸ್: ಜೆಡಿಎಸ್‍ನ ಭದ್ರೇಗೌಡರು ಉಪಮೇಯರ್ ಆಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಘೋಷಿಸಿದ ನಂತರ 12 ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಯಿತು.
ಆದರೆ, ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ತಮ್ಮ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ತಮ್ಮ ಬೆಂಬಲಿಗ ಸದಸ್ಯರಾದ ಹೇರೋಹಳ್ಳಿ ವಾರ್ಡ್ ಸದಸ್ಯ ರಾಜಣ್ಣ ಅವರಿಂದ ನಗರ ಯೋಜನೆ ಸ್ಥಾಯಿ ಸಮಿತಿಗೆ, ಹೆಮ್ಮಿಗೆಪುರ ವಾರ್ಡ್ ಸದಸ್ಯ ಆರ್ಯ ಶ್ರೀನಿವಾಸ್ ಅವರಿಂದ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿಗೆ, ದೊಡ್ಡ ಬಿದರಕಲ್ಲು ವಾರ್ಡ್‍ನ ವಾಸುದೇವಮೂರ್ತಿ ಅವರಿಂದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಹೆಚ್ಚುವರಿಯಾಗಿ ನಾಮಪತ್ರ ಸಲ್ಲಿಸುವಂತೆ ಸೂಚಿಸಿ ನಾನು ಹೇಳುವವರೆಗೂ ವಾಪಸ್ ಪಡೆಯಬಾರದು ಎಂದು ತಾಕೀತು ಮಾಡಿದ್ದರು.
ಯಾವುದೇ ಸ್ಥಾಯಿ ಸಮಿತಿಗಳಿಗೆ 11ಕ್ಕೂ ಮೇಲ್ಪಟ್ಟು ಹೆಚ್ಚುವರಿಯಾಗಿ ಸದಸ್ಯರು ನಾಮಪತ್ರ ಸಲ್ಲಿಸಿದರೆ ಚುನಾವಣೆ ನಡೆಯಲೇಬೇಕು. ಹೀಗಾಗಿ ಹೆಚ್ಚುವರಿ ನಾಮಪತ್ರ ಸಲ್ಲಿಕೆಯಾದ ಕಾರಣ ಶಿವಯೋಗಿ ಕಳಸದ್ ಅವರು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲೇಬೇಕಿದೆ.ಕಾಂಗ್ರೆಸ್‍ನವರು ತಮ್ಮ ಕಡೆಯ ಹೆಚ್ಚುವರಿ ಸದಸ್ಯರ ನಾಮಪತ್ರ ವಾಪಸ್ ಪಡೆಯುವರೇ, ಇಲ್ಲವೇ ಎಂಬ ಬಗ್ಗೆ ತೀರ್ಮಾನ ಮಾಡುವಂತೆ ತಿಳಿಸಿ ಅರ್ಧ ಗಂಟೆ ಚುನಾವಣೆ ಮುಂದೂಡಿದರು.
ಇದೆಲ್ಲ ಆದ ನಂತರ ಶಾಸಕ ರಾಮಲಿಂಗಾರೆಡ್ಡಿ ಮತ್ತಿತರ ಪ್ರಮುಖರು ಎಸ್.ಟಿ.ಸೋಮಶೇಖರ್ ಅವರೊಂದಿಗೆ ಮಾತುಕತೆ ನಡೆಸಿ ಸಮಾಧಾನಪಡಿಸಿದ್ದರಿಂದ ಸದಸ್ಯರ ಆಯ್ಕೆಗೆ ಚುನಾವಣೆ ಸುಲಲಿತವಾಗಿ ನಡೆಯಿತು.
ಈ ವೇಳೆ ಶಾಸಕ ರಾಮಲಿಂಗಾರೆಡ್ಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಎರಡೂ ಪಕ್ಷಗಳ ಮುಖಂಡರು ಚರ್ಚಿಸಿಯೇ ಭದ್ರೇಗೌಡ ಅವರನ್ನು ಉಪಮೇಯರ್ ಮಾಡಿದ್ದೇವೆ ಎಂದು ತಿಳಿಸಿದರು.
ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರರಿಗೆ ಹಂಚಿಕೊಂಡಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.