
ಲಂಡನ್, ಡಿ.5-ಇದು ವೈದ್ಯಕೀಯ ಲೋಕದ ವಿಸ್ಮಯ. ಮೃತ ಮಹಿಳೆಯ ಭ್ರೂಣ ದಾನ ಪಡೆದ ಬ್ರೆಜಿಲ್ನ ವನಿತೆಯೊಬ್ಬರು ಕಸಿ ಚಿಕಿತ್ಸೆ ಬಳಿಕ ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಚ್ಚರಿ ಘಟನೆ ನಡೆದಿದೆ.
ಈ ವಿಧಾನದಲ್ಲಿ ಜನಿಸಿದ ವಿಶ್ವದ ಪ್ರಪ್ರಥಮ ಮಗು ಎಂಬ ಹೆಗ್ಗಳಿಕೆಗೆ ಈ ಶಿಶು ಪಾತ್ರವಾಗಿದೆ. ಸಂತಾನ ರಹಿತ ಮಹಿಳೆಯರು ಮತ್ತು ದಂಪತಿಯರಿಗೆ ಈ ವಿಧಾನ ಇನ್ನು ಮುಂದೆ ವರದಾನವಾಗಲಿದೆ.
ವೈದ್ಯಕೀಯ ಲೋಕದ ಈ ಅಚ್ಚರಿ ಕುರಿತು ಲ್ಯಾನ್ಸೆಟ್ ಮೆಡಿಕಲ್ ಜನರಲ್ ವರದಿ ಮಾಡಿದೆ. ಮೃತ ಮಹಿಳೆಯ ಗರ್ಭಾಶಯ, ಅಸ್ಥಿರಜ್ಜು ಮತ್ತು ರಕ್ತನಾಳಗಳನ್ನು ದಾನ ಪಡೆದ ಮಹಿಳೆಯ ಅಂಗಾಂಗಗಳಿಗೆ ಅವುಗಳನ್ನು ಜೋಡಿಸುವ ಮೂಲಕ ಯಶಸ್ವಿ ಕಸಿ ನಡೆಸಲಾಯಿತು.
35 ವಾರಗಳ ಕೃತಕ ವಿಧಾನ ಗರ್ಭಧಾರಣೆ ನಂತರ ಬ್ರೆಜಿಲ್ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಮಗು 2.250 ಕೆಜಿ ತೂಕ ಹೊಂದಿದೆ.
ಅಮೆರಿಕಾ ಸೇರಿದಂತೆ ಅನೇಕ ಮುಂದುವರೆದ ರಾಷ್ಟ್ರಗಳಲ್ಲಿ ಮೃತ ಮಹಿಳೆಯರ ಭ್ರೂಣವನ್ನು ದಾನ ಪಡೆದು ಕಸಿ ಮೂಲಕ ಶಿಶು ಜನನಕ್ಕೆ ಹಲವು ವರ್ಷಗಳಿಂದ ನಡೆದ 10ಕ್ಕೂ ಹೆಚ್ಚು ಪ್ರಯತ್ನಗಳು ವಿಫಲವಾಗಿದ್ದವು. ಆದರೆ ಲಂಡನ್ನಲ್ಲಿ ಈ ವಿಧಾನ ಅತ್ಯಂತ ಯಶಸ್ವಿಯಾಗಿರುವುದು ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ.