ಮಹಾ ಘಟಬಂಧನ್ ಗೆ ವೇದಿಕೆ ಸಜ್ಜು: ಡಿ.10ರಂದು ಪ್ರತಿಪಕ್ಷಗಳ ಮಹತ್ವದ ಸಭೆ

ಲಕ್ನೋ, ಡಿ.4-ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯವನ್ನು ತಡೆಯಲು ಮಹಾ ಘಟಬಂಧನ್(ಮಹಾಮೈತ್ರಿ)ಗೆ ವೇದಿಕೆ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಡಿ.10ರಂದು ಪ್ರತಿಪಕ್ಷಗಳ ಮಹತ್ವದ ಸಭೆ ನಡೆಯಲಿದೆ.

ಸಮಾಜವಾದಿ, ಬಹುಜನ ಸಮಾಜ ಪಕ್ಷ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಹಣಿಯಲು ಸನ್ನದ್ಧವಾಗುವ ನಿರೀಕ್ಷೆ ಇದೆ. ಆದರೆ ಈ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಿಎಸ್‍ಪಿ ಇನ್ನೂ ಖಚಿತಪಡಿಸಿಲ್ಲ. ಹೀಗಾಗಿ ಈ ಪಕ್ಷದ ತೀರ್ಮಾನದತ್ತ ಎಲ್ಲರ ಗಮನ ನೆಟ್ಟಿದೆ.

ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನಾಯಕತ್ವದ ಸಮಾಜವಾದಿ ಪಕ್ಷ, ಸಭೆಯಲ್ಲಿ ಭಾಗವಹಿಸುವುದಾಗಿ ಈಗಾಗಲೇ ತಿಳಿಸಿದೆ. ಕಾಂಗ್ರೆಸ್ ಮತ್ತು ಆರ್‍ಎಲ್‍ಡಿ ಸಭೆಯಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದು, ಮಾಯಾವತಿ ಪಕ್ಷವೂ ಭಾಗವಹಿಸುವ ಆಶಾಭಾವನೆ ಹೊಂದಿವೆ.

ಐದು ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣಾ ಫಲಿತಾಂಶ(ಡಿ.11)ಕ್ಕೆ ಮುನ್ನ ದಿನ ಸೋಮವಾರ ನಡೆಯಲಿರುವ ಪ್ರತಿಪಕ್ಷಗಳ ಈ ಸಭೆ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ