ಬೆಂಗಳೂರು, ಡಿ.4- ಜಿಜ್ಞಾಸದ ಅಂತಾರಾಷ್ಟ್ರೀಯ ಸಮ್ಮೇಳನ ಹಾಗೂ ಆರೋಗ್ಯ ಮೇಳವನ್ನು ನಾಳೆಯಿಂದ 9 ರವರೆಗೆ ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಟಿಎಸ್ಎಸ್ಟಿನ ಮುಖಂಡ ಅಲ್ಲಮಪ್ರಭು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಮೇಳದ ಜತೆಗೆ ಭಾರತ ವರ್ಷದ ಪಾರಂಪರಿಕ ಚಿಕಿತ್ಸಾ ಪದ್ದತಿಯ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಇದೇ 6ರಿಂದ 8ರವರೆಗೆ ಏರ್ಪಡಿಸಲಾಗಿದೆ. ಆಯುರ್ವೇದಿಕ್ ಚಿಕಿತ್ಸೆಯು ಸಾರ್ವಜನಿಕರಿಗೆ ಅತ್ಯಮೂಲ್ಯವಾಗಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ತಿಳಿಸುವ ಉದ್ದೇಶದಿಂದ ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ 20 ರಾಷ್ಟ್ರಗಳ 30ಕ್ಕಿಂತಲೂ ಅಧಿಕ ಅಂತಾರಾಷ್ಟ್ರೀಯ ಖ್ಯಾತಿಯ ದಿಗ್ಗಜರು ಪ್ರಬಂಧ ಮಂಡನೆ ಮಾಡಲಿದ್ದಾರೆ.175ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುವುದು.ಸುಮಾರು 30 ಸಾವಿರಕ್ಕೂ ಅಧಿಕ ಜನರು ವೀಕ್ಷಣೆ ಮಾಡಲಿದ್ದು, 25 ಸಾವಿರ ದೇಶ-ವಿದೇಶದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದರಲ್ಲಿ ಸಾಂಪ್ರದಾಯಿಕ ಆರೋಗ್ಯ ಪದ್ದತಿ ಜಾಗತಿಕ ಪ್ರದರ್ಶನ, ಆಯುಷ್ ಕ್ಲಿನಿಕ್ಗಳು, ಗಿಡಮೂಲಿಕೆಗಳ ಪ್ರದರ್ಶ, ಅರಿವು ಆರೋಗ್ಯ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಚಿತ್ರಕಲೆ ಪ್ರದರ್ಶನ, ಸ್ಪರ್ಧೆ, ಕಿರುಚಿತ್ರ ಪ್ರದರ್ಶನ ಸ್ಪರ್ಧೆ, ಆರೋಗ್ಯಕರ ಆಹಾರ ಮಳಿಗೆಗಳು ಸೇರಿದಂತೆ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಆರೋಗ್ಯ ಮಳಿಗೆಗಳು ತೆರೆಯಲಾಗುವುದು ಎಂದು ತಿಳಿಸಿದರು.
ಈ ಸಮ್ಮೇಳನವನ್ನು ಆಯುಷ್ ಇಲಾಖೆಯ ಕಾರ್ಯದರ್ಶಿ ಪದ್ಮಶ್ರೀ ವೈದ್ಯಾ ರಾಜೇಶ್ ಕೋಟಿಕ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯಪಾಲ ವಿ.ಆರ್.ವಾಲಾ, ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ, ಶ್ರೀಪಾದ್ ಎಸ್ಸೋನಾಯಕ್, ಅಲ್ಫಾನ್ಸ್ ಕನ್ನಂಥಮ್, ಆರ್ಟ್ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಭಾಗವಹಿಸಲಿದ್ದಾರೆ ಎಂದರು.