ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ, ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ

ಬೆಂಗಳೂರು, ಡಿ.4-ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ಆಯೋಗವು ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ಇಂದು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸಿಐಡಿ ಕಚೇರಿ ಸಮೀಪವಿರುವ ಕೆಪಿಎಸ್‍ಸಿ ಕಚೇರಿ ಎದುರು ಸುರೇಶ್‍ಕುಮಾರ್ ಹಾಗೂ ನೂರಾರು ಉದ್ಯೋಗಾಕಾಂಕ್ಷಿಗಳು ತಕ್ಷಣವೇ ಈಗಾಗಲೇ ನೇಮಕಗೊಂಡಿರುವ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ಪಟ್ಟು ಹಿಡಿದರು.

ನೇಮಕಾತಿ ಪ್ರಕ್ರಿಯೆ ಮುಗಿದು ಹಲವು ತಿಂಗಳಾಗಿದೆ.ಆದರೆ ಕೆಪಿಎಸ್‍ಸಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅಂತಿಮ ಪಟ್ಟಿಯನ್ನು ಪ್ರಕಟಿಸದೆ ಆಕಾಂಕ್ಷಿಗಳಿಗೆ ನಿರಾಸೆ ಮಾಡುತ್ತಿದ್ದಾರೆ.ಇದರಿಂದ ನಮ್ಮ ಭವಿಷ್ಯವೇ ಅಂಧಕಾರದಲ್ಲಿದೆ ಎಂದು ಪ್ರತಿಭಟನಾನಿರತರು ತಮ್ಮ ಆಕ್ರೋಶ ಹೊರಹಾಕಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುರೇಶ್‍ಕುಮಾರ್, ಕೆಪಿಎಸ್‍ಸಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಉದ್ಯೋಗಾಕಾಂಕ್ಷಿಗಳು ತಮ್ಮ ಭವಿಷ್ಯ ಏನಾಗುತ್ತದೋ ಎಂಬ ಚಿಂತೆಯಲ್ಲಿದ್ದಾರೆ. ಏನೇ ತಾಂತ್ರಿಕ ಸಮಸ್ಯೆ ಇದ್ದರೂ ಪರಿಹರಿಸಬೇಕೆಂದು ಆಗ್ರಹಿಸಿದರು.

ನೇಮಕಾತಿ ಪಟ್ಟಿ ಇಂದು ಬಿಡುಗಡೆಯಾಗುತ್ತದೋ, ನಾಳೆ ಬಿಡುಗಡೆಯಾಗುವುದೋ ಎಂಬ ಆತಂಕದಲ್ಲಿಯೇ ಸಾವಿರಾರು ವಿದ್ಯಾರ್ಥಿಗಳು ದಿನದೂಡುತ್ತಿದ್ದಾರೆ.ಕೆಪಿಎಸ್‍ಸಿ ಪ್ರಮಾದವೋ, ಇಲ್ಲವೇ ಸರ್ಕಾರದ ಅಸಹಕಾರವೋ ತಿಳಿಯುತ್ತಿಲ್ಲ. ಕೂಡಲೇ ಪಟ್ಟಿಯನ್ನು ಬಿಡುಗಡೆ ಮಾಡಿ ನೇಮಕಾತಿಗೊಂಡವರಿಗೆ ಆದೇಶ ಪತ್ರ ನೀಡಬೇಕೆಂದು ಒತ್ತಾಯಿಸಿದರು.

ಬಳಿಕ ಪ್ರತಿಭಟನಾನಿರತರ ಒತ್ತಾಯದ ಮೇರೆಗೆ ಸುರೇಶ್‍ಕುಮಾರ್, ಕೆಪಿಎಸ್‍ಸಿ ಅಧ್ಯಕ್ಷ ಶ್ಯಾಮ್‍ಭಟ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಸರ್ಕಾರದ ಮುಖ್ಯಸ್ಥರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಸಾವಿರಾರು ಅಭ್ಯರ್ಥಿಗಳು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ.ಅದರಲ್ಲೂ ಗ್ರಾಮೀಣ ಭಾಗದ ಅನೇಕರು ಕಷ್ಟಪಟ್ಟು ಓದಿ, ಕೆಲಸ ಗಿಟ್ಟಿಸಿಕೊಂಡಿದ್ದಾರೆ. ವಿಳಂಬವಾಗುತ್ತಿರುವುದರಿಂದ ಬದುಕಿನ ಭರವಸೆ ಕಳೆದುಕೊಂಡಿದ್ದಾರೆ.ಹೀಗಾಗಿ ಸರ್ಕಾರ ಉದ್ಯೋಗ ನೀಡಬೇಕು.ಇದಕ್ಕೆ ನೀವು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಶ್ಯಾಮ್‍ಭಟ್, ಸರ್ಕಾರದ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುತ್ತೇವೆ. ಯಾರೊಬ್ಬರೂ ಆತಂಕಗೊಳ್ಳುವ ಅಗತ್ಯವಿಲ್ಲ. ತಾಂತ್ರಿಕ ಕಾರಣಗಳಿಂದ ನೇಮಕಾತಿ ಆದೇಶ ಬಹಿರಂಗಪಡಿಸಲು ಸಾಧ್ಯವಾಗಿಲ್ಲ. ಎಲ್ಲವೂ ಸುಖಾಂತ್ಯ ಕಾಣಲಿದೆ ಎಂಬ ಭರವಸೆ ನೀಡಿದರು.
ಅಧ್ಯಕ್ಷರಿಂದ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ