ಬೆಂಗಳೂರು, ಡಿ.3- ಇತಿಹಾಸ ಪ್ರಸಿದ್ಧ ಬುಲ್ ಟೆಂಪಲ್ ಅನ್ನು ಪ್ರಮುಖ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ದಿವಂಗತ ಅನಂತಕುಮಾರ್ ಅವರ ಕನಸನ್ನು ನನಸು ಮಾಡಲು ಬಿಬಿಎಂಪಿ ಚಿಂತನೆ ನಡೆಸಲಿದೆ ಎಂದು ಮೇಯರ್ ಗಂಗಾಂಬಿಕೆ ಇಂದಿಲ್ಲಿ ತಿಳಿಸಿದರು.
ಬಸವನಗುಡಿಯಲ್ಲಿ ದೊಡ್ಡ ಬಸವಣ್ಣನಿಗೆ ಕಡಲೆ ಕಾಯಿ ತುಲಾಭಾರ ಮಾಡುವ ಮೂಲಕ ಇತಿಹಾಸ ಪ್ರಸಿದ್ಧ ಕಡಲೆ ಕಾಯಿ ಪರಿಷೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶತಮಾನಗಳು ಕಳೆದರೂ ಕಡಲೆಕಾಯಿ ಪರಿಷೆ ತನ್ನ ಛಾಪು ಕಳೆದುಕೊಂಡಿಲ್ಲ. ಮನುಷ್ಯ ಎಷ್ಟೇ ಆಧುನಿಕತೆಗೆ ಹೊಂದಿಕೊಂಡಿದ್ದರೂ ಪ್ರತಿ ವರ್ಷ ಕಡಲೆಕಾಯಿ ಪರಿಷೆಗೆ ಬರುವುದನ್ನು ಮರೆಯುತ್ತಿಲ್ಲ. ಹೀಗಾಗಿ ಇಂದಿಗೂ ಪರಿಷೆಗೆ ಜನಜಾತ್ರೆ ಸೇರುತ್ತಿದೆ ಎಂದರು.
ಪರಿಷೆ ನಡೆಯುವ ದೊಡ್ಡ ಗಣಪತಿ ಮತ್ತು ಬಸವಣ್ಣ ದೇವಾಲಯವಿರುವ ಬಸವನಗುಡಿಯನ್ನು ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವುದು ಅನಂತಕುಮಾರ್ ಅವರ ಆಶಯವಾಗಿತ್ತು.ಆದರೆ ದುರಾದೃಷ್ಟವಶಾತ್ ಅವರು ಈ ಬಾರಿಯ ಪರಿಷೆಯಲ್ಲಿ ಇಲ್ಲದಿರುವುದು ದುಃಖಕರ ಸಂಗತಿ.
ಹೀಗಾಗಿ ಅನಂತಕುಮಾರ್ ಅವರ ಆಶಯವನ್ನು ಈಡೇರಿಸಲು ಬಿಬಿಎಂಪಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಗಂಗಾಂಬಿಕೆ ಭರವಸೆ ನೀಡಿದರು.
ಪ್ಲಾಸ್ಟಿಕ್ ಬಳಸಬೇಡಿ: ಸ್ವಚ್ಛ ಬೆಂಗಳೂರಿಗೆ ಅಡಿಪಾಯ ಹಾಕುವುದು ಇಲ್ಲಿನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ಬಾರಿ ಪರಿಷೆಗೆ ಬರುವವವರಾಗಲೀ ವ್ಯಾಪಾರಿಗಳಾಗಲೀ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಬಾರದು ಎಂದು
ಪ್ರತಿ ವರ್ಷ ನಡೆಯುವ ಕಡಲೆಕಾಯಿ ಪರಿಷೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಗ್ರಾಮೀಣ ಸೊಗಡು ಪಸರಿಸುತ್ತಿದೆ.ಇಂತಹ ಕಾರ್ಯಕ್ರಮಗಳನ್ನು ಭವಿಷ್ಯದಲ್ಲೂ ಮುಂದುವರೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಶರವಣ ಮಾತನಾಡಿ, ಬುಲ್ಟೆಂಪಲ್ ಅನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ಅನಂತಕುಮಾರ್ ಅವರ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರದ ಸಹಕಾರ ಅಗತ್ಯಎಂದು ಹೇಳಿದರು.
ಬಡವರ ಬಾದಾಮಿ ದರ್ಬಾರ್: ಕಡಲೆಕಾಯಿ ಪರಿಷೆಯಿಂದಾಗಿ ಬಸವನಗುಡಿಯ ರಸ್ತೆ , ರಸ್ತೆಗಳಲ್ಲಿ ರಾಶಿ ರಾಶಿ ಬಡವರ ಬಾದಾಮಿ ಕಡಲೆಕಾಯಿಯೇ ಕಂಡು ಬರುತ್ತಿತ್ತು.
ತಮಿಳುನಾಡು ಮತ್ತು ಆಂಧ್ರ ಸೇರಿದಂತೆ ಹೊಸಕೋಟೆ, ಮಾಗಡಿ, ಕನಕಪುರ, ಕೋಲಾರ ಮತ್ತಿತರ ಭಾಗಗಳಿಂದ ರೈತರು ಪರಿಷೆಗೆ ಬಂದು ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದರು.
ಪರಿಷೆಗೆ ಬಂದು ದೊಡ್ಡ ಗಣಪತಿಗೆ ಪೂಜೆ ಸಲ್ಲಿಸಿ ಬಸವಣ್ಣನ ವಿಗ್ರಹ ದರ್ಶನ ಪಡೆದ ನಾಗರಿಕರು ನಂತರ ಕಡಲೆಕಾಯಿ ವ್ಯಾಪಾರ ಮಾಡುತ್ತಿರುವ ದೃಶ್ಯಗಳು ಎಲ್ಲೆಲ್ಲೂ ಕಂಡು ಬರುತ್ತಿತ್ತು.
ಸಂತೆಯಾದ ಬಸವನಗುಡಿ: ಹೈಟೆಕ್ ಪ್ರದೇಶವಾಗಿರುವ ಬಸವನಗುಡಿಯ ರಸ್ತೆಗಳು ಕಡಲೆಕಾಯಿ ಪರಿಷೆ ಸಂದರ್ಭದಲ್ಲಿ ಗ್ರಾಮೀಣ ಭಾಗದ ಸಂತೆಯಾಗಿ ಪರಿವರ್ತನೆಗೊಳ್ಳುತ್ತದೆ.
ರಸ್ತೆಗಳಲ್ಲಿ ಕಡಲೆಕಾಯಿ ಅಲ್ಲದೆ ಮಕ್ಕಳ ಆಟಿಕೆ ಸಾಮಾನು, ಬೊಂಬೆಗಳ ಮಾರಾಟ, ಸಿಹಿ ತಿಂಡಿ -ತಿನಿಸುಗಳ ಭರ್ಜರಿ ವ್ಯಾಪಾರ ನಡೆಯುತ್ತದೆ.ಇದರ ಜತೆಗೆ ಮಹಿಳೆಯರ ಅಲಂಕಾರಿಕ ವಸ್ತುಗಳು, ಬಟ್ಟೆಗಳು ಪ್ರದರ್ಶನಗೊಳ್ಳುತ್ತಿತ್ತು.
ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಕಡಲೆಕಾಯಿ ಪರಿಷೆಗೆ ನಾಡಿನ ಮೂಲೆ, ಮೂಲೆಗಳಿಂದ ಜನರು ಆಗಮಿಸುತ್ತಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು , ಐಟಿ-ಬಿಟಿಯ ಹೈಟೆಕ್ ಜನರನ್ನು ಆಕರ್ಷಿಸುತ್ತಿರುವುದು ಕಡಲೆ ಕಾಯಿ ಪರಿಷೆಯ ಹೈಲೆಟ್ಸ್.
ಕಡಲೆಕಾಯಿ ಪರಿಷೆ ಉದ್ಘಾಟನೆಯಲ್ಲಿ ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತಿತರ ಬಿಬಿಎಂಪಿ ಸದಸ್ಯರು ಪಾಲ್ಗೊಂಡಿದ್ದರು.