ಬೆಂಗಳೂರು,ಡಿ.3- ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ಸಿ) ಅಧ್ಯಕ್ಷ ಸ್ಥಾನಕ್ಕೆ ಐಎಎಸ್ ಅಧಿಕಾರಿಗಳು ಸೇರಿದಂತೆ 20ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ರೇಸ್ನಲ್ಲಿ ಕೆಪಿಎಸ್ಸಿ ಅಧ್ಯಕ್ಷರಾಗಿರುವ ಟಿ. ಶ್ಯಾಮ್ಭಟ್ ಕೂಡ ಇದ್ದಾರೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.
ಆಯೋಗದ ಅಧ್ಯಕ್ಷ ಹಾಗೂ ಕಾನೂನು ಸದಸ್ಯ ಸ್ಥಾನಕ್ಕೆ ದೊಡ್ಡ ಸಂಖ್ಯೆಯಲ್ಲೇ ಅರ್ಜಿಗಳು ಬಂದಿದೆ.ಅರ್ಜಿ ಸಲ್ಲಿಸಲು ಮಂಗಳವಾರ ಕೊನೆ ದಿನವಾಗಿತ್ತು.ಶ್ಯಾಮ್ ಭಟ್ ಅವರ ಅಧಿಕಾರ ಅವಧಿ ಡಿಸೆಂಬರ್ 12ಕ್ಕೆ ಮುಕ್ತಾಯವಾಗುತ್ತದೆ.ಇದೀಗ ಅವರು ಕೆಇಆರ್ಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ್ದಾರೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಎಸ್. ಪಿ. ಸಕ್ರಿ, ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಕೆ.ಪಟ್ನಾಯಕ್, ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ಎಂ.ಲಕ್ಷ್ಮೀ ನಾರಾಯಣ್ ಅವರು ಅರ್ಜಿ ಸಲ್ಲಿಸಿರುವರಲ್ಲಿ ಪ್ರಮುಖರಾಗಿದ್ದಾರೆ.ಇದುವರೆಗೂ ನಿವೃತ್ತ ಐಎಎಸ್ ಅಧಿಕಾರಿಗಳೇ ಅಧ್ಯಕ್ಷರಾಗಿ ಕೆಲಸ ಮಾಡಿರುವುದು ವಿಶೇಷ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚನೆ ಮಾಡಲಾಗಿದ್ದು, ಕೇಂದ್ರ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ, ಮುಖ್ಯ ಕಾರ್ಯದರ್ಶಿ ಸಮಿತಿ ಸದಸ್ಯರಾಗಿದ್ದಾರೆ. ಆದ್ರೆ ಆಯ್ಕೆ ಸಮಿತಿ ಸಭೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.