ಬೆಂಗಳೂರು,ಡಿ.3-ಕಳೆದ ಜೂನ್ನಿಂದ ನವೆಂಬರ್ ಅಂತ್ಯದವರೆಗೆ ರಾಜ್ಯದ ಕಾವೇರಿ ಕೊಳ್ಳದಿಂದ ತಮಿಳುನಾಡಿಗೆ 387 ಟಿಎಂಸಿ ಅಡಿ ನೀರು ಬಿಡಲಾಗಿದೆ.
ಈ ಬಾರಿಯ ಮುಂಗಾರು ಮಳೆ ಆರಂಭದಲ್ಲೇ ಆರ್ಭಟಿಸಿ ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ನದಿಗಳಲ್ಲಿ ಪ್ರವಾಹ ಉಂಟಾದ ಪರಿಣಾಮ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಅನಿವಾರ್ಯವಾಗಿ ಹರಿಸಲಾಗಿದೆ.
ಮುಂಗಾರು ಮಳೆಯ ಆರಂಭದಲ್ಲೇ ಕಾವೇರಿ ಜಲಾನಯನ ಭಾಗದ ಜಲಾಶಯಗಳು ಭರ್ತಿಯಾಗಿದ್ದವು. ಹೀಗಾಗಿ ಆರಂಭದಿಂದಲೂ ಅಧಿಕ ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಡಬೇಕಾಯಿತು.
ಜೂನ್ನಿಂದ ನವೆಂಬರ್ ಅಂತ್ಯದವರೆಗೆ ನ್ಯಾಯಾಲಯದ ಆದೇಶದಂತೆ 157 ಟಿಎಂಸಿ ಅಡಿ ನೀರನ್ನು ಬಿಡಬೇಕಾಯಿತು. ಆದರೆ 387 ಟಿಎಂಸಿ ನೀರು ಹರಿದು ಹೋಗಿದ್ದು, ಹೆಚ್ಚುವರಿಯಾಗಿ 230 ಟಿಎಂಸಿ ನೀರನ್ನು ಬಿಡಲಾಗಿದೆ.
ಹೆಚ್ಚುವರಿ ನೀರು ಸಮುದ್ರದ ಪಾಲಾಗಿದೆ. ತಮಿಳುನಾಡಿಗೂ ಉಪಯೋಗವಾಗಿಲ್ಲ. ಕರ್ನಾಟಕಕ್ಕೂ ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಜೂನ್ನಿಂದ 2019ರ ಮೇ ಅಂತ್ಯದವರೆಗೂ ಕರ್ನಾಟಕದಿಂದ ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಬಿಡಬೇಕು. ಈಗಾಗಲೇ ಅದರ ಎರಡು ಪಟ್ಟು ನೀರು ಬಿಡಲಾಗಿದೆ.
ಇನ್ನು ನಿಗದಿ ಮಾಡಿದಂತೆ ಮಾಸಿಕ ನೀರಿನ ಪ್ರಮಾಣ ಸಹಜವಾಗಿಯೇ ಹರಿದು ಹೋಗಲಿದೆ.ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರಿನ ಸದ್ಭಳಕೆ ಮಾಡಿಕೊಳ್ಳುವ ಉದ್ದೇಶದಿಂದ ಕುಡಿಯುವ ನೀರಿಗಾಗಿ ಮೇಕೆದಾಟು ಬಳಿ ಜಲಾಶಯ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಆದರೆ ತಮಿಳುನಾಡು ಸರ್ಕಾರ ಇದಕ್ಕೆ ಆಕ್ಷೇಪವೆತ್ತಿ ನ್ಯಾಯಾಲಯದ ಮೊರೆ ಹೋಗಿದೆ. ಈಗಾಗಲೇ ರಾಜ್ಯ ಸರ್ಕಾರ ಹೆಚ್ಚುವರಿ ನೀರಿನ ಸಂಗ್ರಹಕ್ಕೆ ಮಾತ್ರ ಉದ್ದೇಶಿತ ಜಲಾಶಯ ನಿರ್ಮಿಸುವುದಾಗಿ ಸ್ಪಷ್ಟಪಡಿಸಿದ್ದರೂ ತಮಿಳುನಾಡು ಆಕ್ಷೇಪವೆತ್ತುವುದನ್ನು ಮಾತ್ರ ಬಿಟ್ಟಿಲ್ಲ. ತಮಿಳುನಾಡಿಗೆ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟೇ ಜಲಾಶಯ ನಿರ್ಮಿಸುವ ಉದ್ದೇಶ ರಾಜ್ಯ ಸರ್ಕಾರ ಹೊಂದಿದೆ.ಮೇಕೆದಾಟು ಯೋಜನೆ ನಿರ್ಮಾಣ ವಿಚಾರ ಜನರಲ್ಲಿ ತೀವ್ರ ಕುತೂಹಲವನ್ನು ಕೆರಳಿಸಿದೆ.