ಬೆಂಗಳೂರು, ಡಿ.3-ಸಂಸತ್ತಿನ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸಂಸದರೊಂದಿಗೆ ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ.
ವಿಧಾನಸೌಧದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಹಾಗೂ ಲೋಕಸಭಾ ಸದಸ್ಯರು ಪಾಲ್ಗೊಳ್ಳಲಿದ್ದು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಂಜೂರಾಗಬೇಕಿರುವ ಯೋಜನೆಗಳು ಸೇರಿದಂತೆ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಗಮನ ಸೆಳೆಯಲು ಸಲಹೆ ನೀಡುವ ಸಾಧ್ಯತೆ ಇದೆ.
ಪ್ರಮುಖವಾಗಿ ರಾಜ್ಯ ಎದುರಿಸುತ್ತಿರುವ ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರದಿಂದ ಸಹಾಯ, ವಿದ್ಯುತ್ ಸಮಸ್ಯೆ ನಿವಾರಣೆಗೆ ಕಲ್ಲಿದ್ದಲು ಪೂರೈಕೆ ಸೇರಿದಂತೆ ಇನ್ನಿತರ ಮಹತ್ತರ ವಿಷಯಗಳ ಬಗ್ಗೆ ಚರ್ಚಿಸಿ ರಾಜ್ಯದ ಪರವಾಗಿ ಪ್ರಸ್ತಾಪಿಸುವಂತೆ ಸೂಚಿಸಲಾಗುವುದು.
ವಿವಿಧ ಬೆಳೆಗಳ ಬೆಲೆ ಕುಸಿತ, ಸಣ್ಣ ಪುಟ್ಟ ತೊಡಕುಗಳು, ಕೇಂದ್ರದಿಂದ ರೈತರಿಗೆ ಸಿಗಬೇಕಾದ ಪರಿಹಾರ, ಅದರಲ್ಲೂ ಪ್ರಮುಖವಾಗಿ ಮೇಕೆದಾಟು ಯೋಜನೆ ಕುರಿತಂತೆ ತಮಿಳುನಾಡು ಸರ್ಕಾರದ ಮಾತಿಗೆ ಕೇಂದ್ರ ಮಣಿಯದಂತೆ ಮನವೊಲಿಸುವ ಕೆಲಸ ನಿರ್ವಹಿಸುವ ಜವಾಬ್ದಾರಿ ಬಗ್ಗೆ ನಾಳಿನ ಸಭೆಯಲ್ಲಿ ಚರ್ಚೆಯಾಗಲಿದೆ.
ಒಟ್ಟಾರೆ ಚಳಿಗಾಲದ ಅಧಿವೇಶನದಲ್ಲಿ ಸಂಸದರು ರಾಜ್ಯಕ್ಕೆ ಅಗತ್ಯವಿರುವ ಹಾಗೂ ಬರಬೇಕಿರುವ ಸೌಲಭ್ಯಗಳ ಕುರಿತಂತೆ ಕೇಂದ್ರದ ಗಮನ ಸೆಳೆಯುವ ಬಗ್ಗೆ ಸೂಚಿಸುವ ಸಾಧ್ಯತೆ ಇದೆ.