ಹಾಸನ : ಕಳೆದ 25 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಮೇಕೆದಾಟು ಯೋಜನೆ ಜಾರಿಗೆ ವಿಸ್ತøತ ಯೋಜನಾ ವರದಿ ತಯಾರಿಸಲು ಅನುಮತಿ ನೀಡಲು ಕೇಂದ್ರ ಸರ್ಕಾರ ನೀಡಿದ ಸಹಕಾರ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಹಾಸನ ನಗರದ ನೂತನ ಬಸ್ ನಿಲ್ದಾಣದಲ್ಲಿಂದು ರಾಷ್ಟ್ರೀಯ ಹೆದ್ದಾರಿ ವಲಯದ ವತಿಯಿಂದ ಏರ್ಪಡಿಸಲಾಗಿದ್ದ, 1865 ಕೋಟಿ ರೂಪಾಯಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೂಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಆಧುನಿಕ ಕೃಷಿ ಪದ್ಧತಿ ಅಳವಡಿಕೆ ಬಗ್ಗೆ ತಾವು 12 ವರ್ಷಗಳ ಹಿಂದೆಯೇ ಚಿಂತಿಸಿದ್ದು ಈಗಾಗಲೇ ಇಸ್ರೆಲ್ ಮಾದರಿಯಲ್ಲಿ ತಂತ್ರಜ್ಞಾನಗಳ ಅಳವಡಿಕೆಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ ಕ್ರಮವಹಿಸಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಜೈವಿಕ ಇಂಧನ ಉತ್ಪಾದನೆಗೆ ಆಧ್ಯತೆ ನೀಡಲಾಗುತ್ತಿದೆ, ಪ್ರತಿ ಜಿಲ್ಲೆಗೆ ಇಬ್ಬರಂತೆ 60 ತಜ್ಞ ರೈತರ ಸಮಿತಿ ರಚಿಸಲಾಗಿದೆ, ಅವರೊಂದಿಗೆ ಚರ್ಚಿಸಿ ಹೊಸ ಕೃಷಿ ಜಾರಿಗೆ ತರಲು ಕ್ರಮವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ರಾಜ್ಯದ ಸಮಗ್ರ ಅಭಿವೃದ್ಧಿ ತಮ್ಮ ಆಧ್ಯತೆಯಾಗಿದ್ದು ಎಲ್ಲರನ್ನೊಳಗೊಂಡು ಸುದೀರ್ಘ ಅಭಿವೃದ್ಧಿಯತ್ತ ಗಮನ ಹರಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಸಹಭಾಗಿತ್ವ ಮತ್ತು ಸಹಕಾರವನ್ನು ಕೋರುತ್ತೇನೆ ಎಂದರು.
ತಮ್ಮ ತಂದೆ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಾರಿಗೆ ಸಚಿವರಾದ ನಿತಿನ್ಗಡ್ಕರಿ ಅವರ ನಡುವೆ ಉತ್ತಮ ಬಾಂಧವ್ಯ ಇದ್ದು, ಅದರ ಫಲವಾಗಿ ಅನೇಕ ಯೋಜನೆಗಳಿಗೆ ಕೇಂದ್ರದಿಂದ ನೆರವು ದೊರೆತಿದೆ. ಇದ್ದಕ್ಕಾಗಿ ಧನ್ಯವಾದಗಳನ್ನು ಸಮರ್ಪಿಸುವುದಾಗಿ ಅವರು ಹೇಳಿದರು.
ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವರಾದ ನಿತಿನ್ಗಡ್ಕರಿ ಅವರು ಮಾತನಾಡಿ ಅಭಿವೃದ್ಧಿ ವಿಚಾರದಲ್ಲಿ ತಾವೆಂದೂ ರಾಜಕೀಯ ಬೆರೆಸುವುದಿಲ್ಲ ಮತ್ತು ಹುಸಿ ಅಶ್ವಾಸನೆಗಳನ್ನು ನೀಡುವುದಿಲ್ಲಾ ಎಂದರು.
ಸಾಧ್ಯವಾದುದ್ದನ್ನು ಮಾತ್ರವೇ ಹೇಳುತ್ತೇನೆ ಮತ್ತು ಅದನ್ನು ಮಾಡಿಯೇ ತೀರುತ್ತೇನೆ ಎಂದ ಸಚಿವರು, ಕರ್ನಾಟಕ ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 2 ಲಕ್ಷ ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕೇಂದ್ರ ಸರ್ಕಾರದ ವತಿಯಿಂದ ಕೈಗೊಳ್ಳಲಾಗಿದೆ. ಇದರಲ್ಲಿ ಕೆಲವು ಕಾಮಗಾರಿಗಳು ಪ್ರಾರಂಭವಾಗಿದ್ದು, ಉಳಿದಿರುವ ಕಾಮಗಾರಿಗಳು ವಿವಿಧ ಹಂತದಲ್ಲಿವೆ ಎಂದು ಸಚಿವರು ಹೇಳಿದರು.
ಕರ್ನಾಟಕ ಸಾಕಷ್ಟು ಅಭಿವೃದ್ದಿ ಸಾಧಿಸಿರುವದು ಹೆಮ್ಮೆಯ ವಿಚಾರ. ಕೇಂದ್ರ ಸರ್ಕಾರ ರಾಜ್ಯದ ಪ್ರಗತಿಗೆ ಎಲ್ಲಾ ರೀತಿಯ ಸಹಕಾರ ಮತ್ತು ನೆರವು ನೀಡಲು ಸಿದ್ಧ ಎಂದ ನಿತಿನ್ಗಡ್ಕರಿ ಅವರು ನೀರಿನ ಬವಣೆ ನೀಗಿಸಲು ನದಿಗಳ ಜೋಡಣೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಕ್ರಮವಹಿಸಿಲಾಗಿದೆ ಎಂದರು.
ಪೊಲಾವರ ಅಣೆಕಟ್ಟು ಯೋಜನೆಗೆ 80,000 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು. ಗೋದಾವರಿ ನದಿಯಿಂದ ವ್ಯರ್ಥವಾಗಿ ಸಮುದ್ರ ಸೇರಿ ನೀರನ್ನು ಕೃಷ್ಣ ನದಿಗೆ ಅಲ್ಲಿಂದ ಕಾವೇರಿ ನದಿಗೆ ಹರಿಸುವ ಯೋಜನೆ ಇದಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿಗೆ 452 ಟಿ.ಎಂ.ಸಿ. ಹೆಚ್ಚುವರಿ ನೀರು ಲಭ್ಯವಾಗಲಿದೆ. ಇದರಿಂದ ಎರಡು ರಾಜ್ಯಗಳ ನಡುವೆ ನೀರಿನ ವಿಷಯವಾಗಿ ಇರುವ ಸಂಘರ್ಷ ಅಂತ್ಯಗೊಳ್ಳಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಅನಿವಾರ್ಯ ಕಾರಣಗಳಿಂದ ಬರಲಾಗದ ಹಿನ್ನಲೆಯಲ್ಲಿ ಮಾಜಿ ಪ್ರದಾನಿ ಹೆಚ್.ಡಿ ದೇವೆಗೌಡ ಅವರು ತಮ್ಮ ಸಂದೇಶವನ್ನು ಕಳುಹಿಸಿದ್ದರು, ಅದನ್ನು ಸಮಾರಂಭದಲ್ಲಿ ಓದಿ ಕೇಂದ್ರ ಸಚಿವರ ಗಮನಕ್ಕೆ ತರಲಾಯಿತು.
ದೇವೇಗೌಡರು ತಮ್ಮ ಸಂದೇಶದಲ್ಲಿ ಸಚಿವ ನಿತಿನ್ಗಡ್ಕರಿ ಅವರಿಗೆ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ತಿಳಿಸಿದ್ದು ವಿಶೇಷವಾಗಿತ್ತು.
ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ.ರೇವಣ್ಣ ಅವರು ಮಾತನಾಡಿ ಇಂದು ಶಂಕುಸ್ಥಾಪನೆಗೊಳ್ಳುತ್ತಿರುವ 1865 ಕೋಟಿರೂಗಳ ಯೋಜನೆಯಿಂದ ಮಂಡ್ಯ, ಮೈಸೂರು ,ತುಮಕೂರು ಹಾಗೂ ಹಾಸನ ಜಿಲ್ಲೆಗೆ ಪ್ರಯೋಜನವಾಗಲಿದೆ ಎಂದರು.
ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿಗಳು ಮತ್ತು ಜಲಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಪಕ್ಷತೀತವಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಗೆ ಕುರಿತಂತೆ 200 ಕೋಟಿ ರೂಗಳಿಗೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕಕ್ಕೆ ಸಲ್ಲಿಸಲಾಗಿದೆ ಅದಕ್ಕೆ ಮಂಜೂರಾತಿ ನೀಡುವಂತೆ ನಿತಿನ್ ಗಡ್ಕರಿಯವರಲ್ಲಿ ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿಗಳ ಕುರಿತಂತೆ ಮಾನ್ಯ ಮುಖ್ಯ ಮಂತ್ರಿಯವರಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು ರಾಜ್ಯ ಸರ್ಕಾರದಿಂದ ಸಹಕಾರ ನೀಡಲಾಗುವುದು ಎಂದರು.
ಲೋಕಸಭಾ ಸದಸ್ಯರಾದ ಎಲ್.ಆರ್. ಶಿವರಾಮೇಗೌಡ, ವಿಧಾನಸಭಾ ಸದಸ್ಯರುಗಳಾದ ಪ್ರೀತಂ ಜೆ ಗೌಡ, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಹೆಚ್.ಕೆ.ಕುಮಾರಸ್ವಾಮಿ, ಎ.ಟಿ. ರಾಮಸ್ವಾಮಿ, ಕೆ.ಎಸ್. ಲಿಂಗೇಶ್, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಎ. ಗೋಪಾಲಸ್ವಾಮಿ, ಆರ್. ಚೌಡರೆಡ್ಡಿ ತೂಪಲ್ಲಿ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಜಿಲ್ಲಾ ಉಸ್ತುವಾರಿ ಕಾರ್ಯದಶೀಗಳಾದ ನವೀನ್ರಾಜ್ಸಿಂಗ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಡಿ.ಐ.ಜಿ. ಶರತ್ ಚಂದ್ರ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮತ್ತಿತರರು ಹಾಜರಿದ್ದರು.