ಲೋಕಸಭೆ ಚುನಾವಣೆ: ಉತ್ತರಪ್ರದೇಶದಲ್ಲಿ ಎಸ್​​ಪಿ-ಬಿಎಸ್​ಪಿ ಮಹಾಮೈತ್ರಿ, ಕಾಂಗ್ರೆಸ್​​ ಕನಸು ನುಚ್ಚುನೂರು!

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಮಹಾಮೈತ್ರಿ ಕೂಗೂ ತುಸು ಹೆಚ್ಚಾಗಿಯೇ ಪ್ರತಿಧ್ವನಿಸುತ್ತಿದೆ. ಮುಂದಿನ ಬಾರಿಯೂ ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ  ಮತ್ತೆ ಅಧಿಕಾರಕ್ಕೆ ಬರಬೇಕಾದಲ್ಲಿ ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಸೀಟುಗಳನ್ನು ಗೆಲ್ಲಬೇಕೆಂದು ರಾಜಕೀತ ತಜ್ಞರು ಹೇಳುತ್ತಿದ್ದಾರೆ. ಆದರೆ, ಈ ಸಲ ಬಿಜೆಪಿಗೆ ಸೆಡ್ಡು ಹೊಡೆಯಲು ಬಹುಜನ ಸಮಾಜವಾದಿ ಪಕ್ಷ(-ಬಿಎಸ್​​ಪಿ) ಹಾಗೂ ಸಮಾಜವಾದಿ ಪಕ್ಷ (ಎಸ್​​ಪಿ) ಮೈತ್ರಿ ಮುಂದಾಗಿದೆ. ಅಲ್ಲದೇ ಶತಾಯಗತಾಯ ಸೋಲಿಸಿಯೇ ತೀರುತ್ತೇವೆಂದು ಪಣತೊಟ್ಟಿದ್ದಾರೆ.
ಬಿಜೆಪಿಯನ್ನು ಮಣಿಸುವ ಕಾರಣದಿಂದಲೇ ಬಿಎಸ್‌ಪಿ, ಎಸ್‌ಪಿ ಮತ್ತು ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಅಂತಿಮ ಹಂತದ ಸಿದ್ಧತೆ ನಡೆಸಿವೆ. ಈ ಬಗ್ಗೆ ಕೊನೆಯ ಸುತ್ತಿನ ಮಾತುಕತೆ ಮುಗಿಸಿರುವ ಮೂರು ಪಕ್ಷಗಳು ಮಹಾಮೈತ್ರಿಕೂಟದಿಂದ ಕಾಂಗ್ರೆಸ್​​ ಅನ್ನು ಹೊರಗಿಡುವ ಸಾಧ್ಯತೆಯಿದೆ ಎಂದು ತಿಳಿಸಿವೆ. ಸದ್ಯಕ್ಕೆ ಪಂಚರಾಜ್ಯ ಚುನಾವಣೆಗಳ ನಡೆಯುತ್ತಿವೆ. ಈ ಚುನಾವಣಾ ಯಾರು ಗೆಲ್ಲಲ್ಲಿದ್ದಾರೆ ಎಂದು ಫಲಿತಾಂಶ ಪ್ರಕಟವಾದ ಕೂಡಲೇ ನಮ್ಮ ಮೈತ್ರಿಕೂಟ ರಚನೆ ಬಗ್ಗೆ ಅಧಿಕೃತವಾಗಿ ಘೋಷಿಸಲಿದ್ದೇವೆ ಎಂದು ತಿಳಿಸಿದ್ದಾರೆ ಮೈತ್ರಿಯ ವಕ್ತಾರರು.

ಈಗಾಗಲೇ ಅಂತಮ ಸುತ್ತಿನ ಮಾತುಕತೆ ಮುಗಿಸಿದ್ದೇವೆ. ಯಾವ ಸಭೆಗೂ ಕಾಂಗ್ರೆಸ್​ಗೆ ಆಹ್ವಾನ ನೀಡಿರಲಿಲ್ಲ. ಬಹುತೇಕ ಕಾಂಗ್ರೆಸ್​ ಪಕ್ಷವನ್ನು ಹೊರಗಿಡುವ ಸಾಧ್ಯತೆಯೇ ಹೆಚ್ಚಾಗಿದೆ. ಆದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಮೇಠಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಸದರಾಗಿ ಪ್ರತಿನಿಧಿಸುತ್ತಿರುವ ರಾಯ್‌ಬರೇಲಿ ಕ್ಷೇತ್ರಗಳಲ್ಲಿ ನಮ್ಮ ಮೈತ್ರಿಯ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರಲು ನಿರ್ಧರಿಸಿದ್ದೇವೆ. ಮುಂದೆ ಏನಾದರೂ ಕಾಂಗ್ರೆಸ್​ ಜೊತೆಗೆ ಮೈತ್ರಿಯ ಕುರಿತು ಮಾತುಕತೆ ನಡೆಯಲಿದೆಯಾ? ಎಂಬ ಬಗ್ಗೆ ಅನುಮಾನವಿದೆ ಎನ್ನುತ್ತಾರೆ ಎಂದು ಎಸ್​ಪಿ ಪಕ್ಷದ ಹಿರಿಯ ಮುಖಂಡರು.
ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್​​ ಬಹುತೇಕ ಗೆಲ್ಲುವ ಸಾಧ್ಯತೆಗಳಿವೆ. ಮಧ್ಯಪ್ರದೇಶ, ಛತ್ತೀಸಗಡ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು. ಒಂದು ವೇಳೆ ಹಾಗೆಯೇ ಆದಲ್ಲಿ, ಉತ್ತರ ಪ್ರದೇಶದ 10ರಿಂದ 15 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್ ಬೇಡಿಕೆ ಇಡಬಹುದು. ಹೀಗಾಗಿ ಕಾಂಗ್ರೆಸ್​​ ಜೊತೆಗೆ ಸೀಟುವ ಹಂಚಿಕೆ ವಿಚಾರದಲ್ಲಿ ಒಮ್ಮತ ಮಾಡುವುದಿಲ್ಲ. ಅಲ್ಲದೇ ಇದು ಸಾಧ್ಯವಾಗದ ಮಾತು ಕೂಡ. ಆದರಿಂದ ಮೈತ್ರಿಯ ಕನಸು ಅಸಾಧ್ಯ ಎಂದು ಖಡಕ್ಕಾಗಿಯೇ ನುಡಿಯುತ್ತಾರೆ ರಾಜಕೀಯ ತಜ್ಞರು.

ಸದ್ಯ ಮೂರು ಮೈತ್ರಿ ಪಕ್ಷಗಳ ನಿರ್ಧಾರ ಉತ್ತರ ಪ್ರದೇಶ ರಾಜ್ಯದಲ್ಲಿ ಮತ್ತೊಮ್ಮೆ ಚಿಗುರೊಡೆಯಲು ಹರಸಾಹಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಆಸೆಗೆ ಮತ್ತೊಮ್ಮೆ ತಣ್ಣೀರೆರಚಿವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಿರಲು ಪಕ್ಷಗಳು ನಿರ್ಧರಿಸಿದ್ದಾರೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಎರಡೂ ಮಹಾಮೈತ್ರಿಯ ನೇತೃತ್ವವಹಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳನ್ನ ತನ್ನ ಕೂಟಕ್ಕೆ ಸೇರಿಸಿಕೊಳ್ಳುವ ಕೆಲಸ ಮಾಡಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿಯೇ ಸ್ಪರ್ಧಿಸುವುದು ಅನಿವಾರ್ಯವಾಗಿದೆ. ಶೀಘ್ರದಲ್ಲೇ ಎಸ್​ಪಿ-ಬಿಎಸ್​ಪಿ ನೇತೃತ್ವದ ಮೈತ್ರಿಕೂಟ ಸದ್ಯದಲ್ಲೇ ಅಧಿಕೃತವಾಗಿ ಘೋಷಣೆಯಾಗಲಿದೆ ಎನ್ನಲಾಗಿದೆ.

ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಬಿಎಸ್​ಪಿ ಪಕ್ಷಕ್ಕೆ ಹೆಚ್ಚು ಸ್ಥಾನ ಬಿಟ್ಟುಕೊಡಲು ಸಮಾಜವಾದಿ ಪಕ್ಷ ಒಪ್ಪಿಕೊಂಡಿದೆ. ಈ ಮೂಲಕ ಅಖಿಲೇಶ್ ಯಾದವ್ ಪ್ರಬುದ್ಧತೆ ಮೆರೆದಿದ್ದಾರೆನ್ನಲಾಗಿದೆ. ಅವರವರ ನಡುವೆ ಆಗಿರುವ ಮಾತುಕತೆಯಂತೆ ಬಿಎಸ್​ಪಿಗೆ 34-40 ಕ್ಷೇತ್ರಗಳು ಸಿಗಲಿವೆ. ಆರ್​ಎಲ್​ಡಿಗೆ 3-4, ಎಸ್​ಬಿಎಸ್​ಪಿ ಮತ್ತು ಅಪ್ನಾ ದಳ್ ಪಕ್ಷಗಳಿಗೆ 2-3 ಕ್ಷೇತ್ರಗಳು ಬರಲಿವೆ. ಈ ಕ್ಷೇತ್ರಗಳು ಹಾಗೂ ಅಮೇಠಿ ಮತ್ತು ರಾಯ್​ಬರೇಲಿ ಹೊರತುಪಡಿಸಿ ಮಿಕ್ಕುಳಿದ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ಧಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ