ಬೆಂಗಳೂರು,ನ.30- ನಾನು ಪಕ್ಷ ಬಿಟ್ಟು ಎಲ್ಲಿಯೂ ಹೋಗಿಲ್ಲ. ಹೋಗುವುದೂ ಇಲ್ಲ. ನನ್ನ ತೇಜೋವಧೆ ಮಾಡಲು ನಮ್ಮ ಪಕ್ಷದ ಕೆಲವು ಸ್ವಯಂಘೋಷಿತ ನಾಯಕರೇ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಸಿಡಿದೆದ್ದಾರೆ.
ಕಾಂಗ್ರೆಸ್ನ ಕೆಲವು ಅತೃಪ್ತ ಶಾಸಕರು ಮುಂಬೈಗೆ ಹೋಗಲಿದ್ದಾರೆ ಎಂಬ ವದ್ದಂತಿ ಹಬ್ಬಿರುವಾಗಲೇ ರಮೇಶ್ ಜಾರಕಿಹೊಳಿ ತಮ್ಮ ಪಕ್ಷದ ಸಚಿವರ ವಿರುದ್ಧ ಈ ರೀತಿ ಬಹಿರಂಗ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾಟ್ರರ್ಸ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಗರದಲ್ಲಿಯೇ ಇದ್ದೇನೆ. ಎಲ್ಲಿಯೂ ಹೋಗಿಲ್ಲ. ಮುಂಬೈಗೂ ಹೋಗಿಲ್ಲ. ಡೆಲ್ಲಿಗೂ ಹೋಗಿಲ್ಲ ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲೇ ಇದ್ದೇನೆ. ನನ್ನ ಹೆಸರಿಗೆ ಮಸಿ ಬಳಿಯಲು ಕೆಲವರು ಈ ರೀತಿ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.
ನಮ್ಮ ನಡುವೆ ಭಿನ್ನಮತ ಇದದ್ದು ನಿಜ. ಅದನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು ಬಗೆಹರಿಸಿದ್ದಾರೆ. ಪಕ್ಷದಲ್ಲಿ ಉಂಟಾಗಿದ್ದ ಎಲ್ಲ ಸಮಸ್ಯೆಗಳು ಬಗೆಹರಿದಿರುವಾಗ ಯಾವುದೇ ಶಾಸಕರು ಮುಂಬೈಗೂ ಹೋಗುವುದಿಲ್ಲ. ಚೆನ್ನೈಗೂ ತೆರಳುವುದಿಲ್ಲ. ಯಾರು ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರರು. ಅದನ್ನು ತಡೆಗಟ್ಟಲು ನಾವ್ಯಾರು ಎಂದು ಪ್ರಶ್ನಿಸಿದರು.
ಈ ಹಿಂದೆಯೂ ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ಸಿಡಿದೆದ್ದಿದ್ದರು. ಈ ಹಿಂದೆ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಸೇರಿದಂತೆ ಇತ್ತೀಚೆಗೆ ಮುಗಿದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಅವರ ಮೇಲೆ ಕೆಂಡ ಕಾರಿದ್ದರು.
ಕಳೆದ ಸಚಿವ ಸಂಪುಟ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಅರ್ಧಕ್ಕೆ ಸಭೆಯಿಂದ ಎದ್ದು ಹೊರಹೋಗಿದ್ದರು. ಕೆಲ ದಿನಗಳ ಹಿಂದೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಆಪ್ತ ಸಹಾಯಕ ಸಂತೋಷ್ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಯಾರೂ ಮುಂಬೈಗೆ ಹೋಗಲ್ಲ:
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅತೃಪ್ತ ಶಾಸಕರು ಮುಂಬೈಗೆ ಹೋಗುತ್ತಾರೆ ಎಂಬುದು ಕೇವಲ ವದಂತಿ.ಪಕ್ಷದಲ್ಲಿ ಎಲ್ಲವೂ ಸರಿ ಇದ್ದಾಗ ಯಾರೂ ಎಲ್ಲೂ ಹೋಗುವುದಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂಬ ಬೇಡಿಕೆಯಿದೆ.ಎಲ್ಲರೂ ಕುಳಿತು ತೀರ್ಮಾನಿಸುತ್ತೇವೆ. ಮಾಧ್ಯಮಗಳಲ್ಲಿ ವರದಿಯಾಗಿರುವುದು ಆಧಾರ ರಹಿತ ಎಂದು ಸ್ಪಷ್ಟಪಡಿಸಿದರು.